ಸಿದ್ಧರಾಮಯ್ಯ ಪತ್ರದ ಫಲ ; ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಆರಂಭ | ವಿದೇಶಾಂಗ ಸಚಿವಾಲಯ

ನವದೆಹಲಿ: ಸಂಸದ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಪ್ರಕ್ರಿಯೆ ಚಾಲನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕ ಸರ್ಕಾರದ ಮನವಿಯ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ಎಸ್‌ಐಟಿಯಿಂದ ಪಾಸ್‌ಪೋರ್ಟ್‌ ರದ್ದತಿ ಮನವಿ ಬಂದಿದೆ. ಹೀಗಾಗಿ ಪಾಸ್‌ಪೋರ್ಟ್‌ ರದ್ದತಿಗೆ ಕ್ರಮ ಕೈಗೊಳ್ಳಲಾಗುವುದು. ಕೆಲವೊಂದು ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದೆ.
ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿ ಕೋರಿ ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 2ನೇ ಬಾರಿ ಪತ್ರ ಬರೆದಿದ್ದರು. ಅಲ್ಲದೆ, ವಿದೇಶಾಂಗ ಸಚಿವಾಲಯ ಮಧ್ಯಪ್ರವೇಶಿಸುವಂತೆಯೂ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ ಎಂದು ತಿಳಿದುಬಂದಿದೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಲೈಂಗಿಕ ದೌರ್ಜನ್ಯದ ಅನೇಕ ವೀಡಿಯೊಗಳು ಎರಡು ಮೂರು ಪೆನ್‌ಡ್ರೈವ್‌ಗಳಲ್ಲಿ ದೊರೆತ ವಿಚಾರ ರಾಜ್ಯದೆಲ್ಲೆಡೆ ಸುದ್ದಿಗೆ ಗ್ರಾಸವಾಗಿದೆ. ಪ್ರಜ್ವಲ್ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಇದು ಸುಳ್ಳು ಎಂದು ಪ್ರಜ್ವಲ್‌ ರೇವಣ್ಣ ಪ್ರತಿಕ್ರಿಯಿಸಿದ್ದು, ಪ್ರಸ್ತುತ ವಿದೇಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸುತ್ತಿದ್ದಾರೆ.

Latest Indian news

Popular Stories