ಯುವಕನ ಸಾವು ಲಾಕಪ್ ಡೆತ್ ಅಲ್ಲ; FIR ಇಲ್ಲದೆ ಠಾಣೆಗೆ ಕರೆಸಿದ್ದು ತಪ್ಪು, ಅಮಾನತಿಗೆ ಸೂಚಿಸಿದ್ದೇನೆ; ಸಿಎಂ ಸಿದ್ದರಾಮಯ್ಯ

ಮೈಸೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಯುವಕನ ಸಾವು ಲಾಕಪ್ ಡೆತ್ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೃತ ಯುವಕನಿಗೆ ಮೂರ್ಛೆ ರೋಗ ಇತ್ತು. ಅದರಿಂದ ಆತ ಮೃತ ಪಟ್ಟಿದ್ದಾನೆ. ಆದರೆ, ಎಫ್ಐಆರ್ ಇಲ್ಲದೆ ಪೊಲೀಸರು ಠಾಣೆಗೆ ಕರೆ ತಂದಿದ್ದು ತಪ್ಪು. ಈ ತಪ್ಪಿಗಾಗಿ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಆರೋಪಿಗೆ ಮೂರ್ಛೆ ರೋಗ​ ಬಂದಿತ್ತು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಕೂಡ ಪ್ರಕರಣದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಒಸಿ(ಮಟ್ಕಾ) ಆಡಿಸುತ್ತಿದ್ದ ಹಿನ್ನಲೆ ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ಸಂಜೆ ಪೊಲೀಸ್ ಠಾಣೆಗೆ ಕರೆತಂದಿದ್ದ‌ರು. ಇದ್ದಕ್ಕಿದ್ದಂತೆ ಅದಿಲ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಆತನನ್ನು ಪೊಲೀಸರು ಅಸ್ಪತ್ರೆಗೆ ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆರೋಪಿ ಸಾವನ್ನಪ್ಪಿದ್ದ.

ಆದರೆ, ಇದೀಗ ಅದಿಲ್‌ ಸಾವಿಗೆ ಪೊಲೀಸರೇ ಕಾರಣ ಎಂದು ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಅದಿಲ್‌ ಸಂಬಂಧಿಕರು ಹಾಗೂ ಸ್ನೇಹಿತರು, ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯ ಆವರಣದಲ್ಲಿ ನೂರಾರು ಜನ ಜಮಾಯಿಸಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Latest Indian news

Popular Stories