ಮನೆಗೆ ಬಂದ ಪ್ರೇಮಿಗೆ ಕೊತಕೊತ ಕುದಿಯುವ ನೀರು ಎರಚಿದ ಯುವತಿ ತಂದೆ

ಮಗಳನ್ನು ಪ್ರೀತಿಸುತ್ತಿದ್ದ (Love Case) ಯುವಕನಿಗೆ ತಂದೆ ಬಿಸಿ ನೀರು ಎರಚಿದ ಘಟನೆ ವರದಿಯಾಗಿದೆ . ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ಘಟನೆ ನಡೆದಿದೆ. ಗಣಪತಿ ಬೀದಿ ನಿವಾಸಿ ಸುಹೇಲ್ ಎಂಬಾತ ಆಸ್ಪತ್ರೆಗೆ ದಾಖಲಾದ ಪ್ರೇಮಿಯಾಗಿದ್ದಾನೆ.

ಸುಹೇಲ್‌ಗೆ ಮದೆನಾಡಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೀತಿ ವಿಚಾರವು ಯುವತಿ ಮನೆಯವರಿಗೆ ತಿಳಿದುಹೋಗಿತ್ತು. ಇವರಿಬ್ಬರ ಪ್ರೀತಿಗೆ ನಿರಾಕರಿಸಿದ್ದರು. ಇತ್ತ ಯುವತಿ ಸುಹೇಲ್‌ಗೆ ಫೋನ್‌ ಮಾಡಿ ಮನೆಯಲ್ಲಿ ಹಿಂಸೆಯಾಗುತ್ತಿದೆ. ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗು ಎಂದಿದ್ದಾಳೆ.

ಪ್ರೀತಿಸಿದವಳು ಈ ಪರಿ ಹಿಂಸೆ ಪಡುತ್ತಿರುವ ವಿಷಯ ತಿಳಿದ ಸುಹೇಲ್‌ ಗಟ್ಟಿ ಮನಸ್ಸು ಮಾಡಿ, ಆಕೆಯ ಮನೆಗೆ ಹೋಗಿದ್ದಾನೆ. ಸುಹೇಲ್‌ ಮನೆಯೊಳಗೆ ಕಾಲಿಡುತ್ತಿದ್ದಂತೆ ಸಿಟ್ಟಾದ ಯುವತಿ ತಂದೆ ಏಕಾಏಕಿ ಕೊತ ಕೊತ ಅಂತ ಕುದಿಯುತ್ತಿದ್ದ ನೀರನ್ನು ಎರಚಿದ್ದಾರೆ. ಬಿಸಿ ನೀರು ಎರಚಿದ್ದರಿಂದ ಸುಹೇಲ್‌ನ ಮುಖ ಹಾಗೂ ಕುತ್ತಿಗೆ ಭಾಗವೆಲ್ಲ ಸುಟ್ಟು ಹೋಗಿದೆ.

ಸದ್ಯ ಸುಹೇಲ್‌ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಾಶತ್‌ ಸುಹೇಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಟ್ಟುಗಾಯಗಳಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Latest Indian news

Popular Stories