ಇದು ಸಂಭ್ರಮಿಸುವ ಸಮಯವಲ್ಲ, ಹೋರಾಟ ನಡೆಸುವ ಸಮಯ | ಆಪ್ ನಾಯಕ ಸಂಜಯ್ ಸಿಂಗ್ ತಿಹಾರ್ ಜೈಲಿನಿಂದ ಬಿಡುಗಡೆ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಆರು ತಿಂಗಳ ನಂತರ ಬುಧವಾರ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ಒಂದು ದಿನದ ನಂತರ, ಎಎಪಿ ನಾಯಕ ಸಂಜಯ್ ಸಿಂಗ್ ಇಂದು ರಾತ್ರಿ ತಿಹಾರ್ ಜೈಲಿನಿಂದ ಹೊರ ಬಂದರು. ಈ ವೇಳೆ ತಮ್ಮನ್ನು ಸ್ವಾಗತಿಸಲು ಜೈಲಿನ ಹೊರಗೆ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಇದು ಸಂಭ್ರಮಿಸುವ ಸಮಯವಲ್ಲ. ಹೋರಾಟ ನಡೆಸುವ ಸಮಯ ಎಂದು ಹೇಳಿದರು.

ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ 13, 2023 ರಿಂದ ರಾಷ್ಟ್ರ ರಾಜಧಾನಿಯ ಹೈ-ಸೆಕ್ಯುರಿಟಿ ಜೈಲಿನಲ್ಲಿ ಇರಿಸಲಾಗಿತ್ತು. ಅವರು ಗೇಟ್ ಸಂಖ್ಯೆ ಮೂರರ ಮೂಲಕ ಹೊರಬಂದರು.
ಜಾಮೀನು ಪ್ರಕ್ರಿಯೆ ಮುಗಿದ ಬಳಿಕ ಸಂಜಯ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಅಪಾರ ಸಂಖ್ಯೆಯ ಎಎಪಿ ಬೆಂಬಲಿಗರು ಜೈಲಿನ ಹೊರಗೆ ಜಮಾಯಿಸಿ “ದೇಖೋ ದೇಖೋ ಕೌನ್ ಆಯಾ, ಶೇರ್ ಆಯಾ, ಶೇರ್ ಆಯಾ” ಮತ್ತು “ಸಂಜಯ್ ಸಿಂಗ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದರು.

ಎಎಪಿ ಕಾರ್ಯಕರ್ತರ ಘೋಷಣೆಗಳ ನಡುವೆ ರಾಜ್ಯಸಭಾ ಸದಸ್ಯರಿಗೆ ಹಾರ ಹಾಕಿ ಸ್ವಾಗತಿಸಲಾಯಿತು. ಈ ವೇಳೆ ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಮತ್ತು ಎಎಪಿ ಶಾಸಕ ದುರ್ಗೇಶ್ ಪಾಠಕ್ ಸಹ ಇದ್ದರು.

ಎಎಪಿ ನಾಯಕನ ಬಿಡುಗಡೆ ಹಿನ್ನೆಲೆಯಲ್ಲಿ ಜೈಲಿನ ಹೊರಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

Latest Indian news

Popular Stories