ಮರು ಆದೇಶ ಬರುವವರೆಗೆ ದೂಧ್ ಸಾಗರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ

ಪಣಜಿ: ಜೂನ್ 1 ರಿಂದ ಜಗತ್ಪ್ರಸಿದ್ಧ ದೂಧ್ ಸಾಗರ ಜಲಪಾತವನ್ನು ಮಳೆಗಾಲದ ಹಿನ್ನೆಲೆಯಲ್ಲಿ ಬಂದ್ ಮಾಡುವಂತೆ ಹೊರಡಿಸಿದ್ದ ಆದೇಶವನ್ನು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮಧ್ಯಸ್ಥಿಕೆಯಲ್ಲಿ ಹಿಂಪಡೆಯಲಾಗಿದೆ.

ಗೋವಾ ವನ್ಯಜೀವಿ ಹಾಗೂ ಪ್ರವಾಸೋದ್ಯಮ ಉಪಸಂರಕ್ಷಕರು ದೂಧ್ ಸಾಗರ ಜಲಪಾತ ಬಂದ್‍ಗೆ ಆದೇಶ ಹೊರಡಿಸಿದ್ದರು. ದೂಧ್ ಸಾಗರ ಜೀಪ್ ಅಸೋಸಿಯೇಶನ್ ವತಿಯಿಂದ ಈ ಬಂದ್ ಆದೇಶ ಹಿಂಪಡೆಯುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿತ್ತು.

ಗೋವಾದ ಭಗವಾನ್ ಮಹಾವೀರ ರಾಷ್ಟ್ರೀಯ ಉದ್ಯಾನವನದಲ್ಲಿ ಜಗತ್ಪ್ರಸಿದ್ಧ ದೂಧ್ ಸಾಗರ ಜಲಪಾತವಿದೆ. ಈ ಜಲಪಾತ ವೀಕ್ಷಣೆಗೆ ದೇಶವಿದೇಶಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಕಳೆದ ಕೆಲ ವರ್ಷಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರು ಜಲಪಾತದಲ್ಲಿ ಬಿದ್ದು ಸಾವನ್ನಪ್ಪುವ ಘಟನೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಳೆಗಾಲದ ಸಂದರ್ಭದಲ್ಲಿ ಜಲಪಾತದ ಬಳಿ ತೆರಳಲು ನಿರ್ಬಂಧ ಹೇರಲಾಗುತ್ತಿತ್ತು.
ಎಲ್ಲಿಯ ವರೆಗೆ ದೂಧ್ ಸಾಗರ ಜಲಪಾತ ಬಂದ್ ಮಾಡುವ ಮರು ಆದೇಶ ಬರುತ್ತದೆಯೋ ಅಲ್ಲಿಯ ವರೆಗೆ ಜಲಪಾತದ ಬಳಿ ತೆರಳಲು ಅವಕಾಶ ಲಭಿಸಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ದೂಧಸಾಗರ ಜೀಪ್ ಅಸೋಸಿಯೇಶನ್ ಸಂಸತ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಾವಂತ್ ಹಾಗೂ ಶಾಸಕ ಗಣೇಶ್ ಗಾವಕರ್ ರವರಿಗೆ ಆಭಾರ ವ್ಯಕ್ತಪಡಿಸಿದ್ದಾರೆ.

Latest Indian news

Popular Stories