ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡುತ್ತಿದ್ದ ವನದ ತಾಯಿ ತುಳಸಿ ಗೌಡ ಇನ್ನಿಲ್ಲ

ಕಾರವಾರ: ವನದ ತಾಯಿ ತುಳಸಿ ಗೌಡ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಈಚಿನ ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದರು. ಅಂಕೋಲಾ ಹೊನ್ನಳ್ಳಿ ಗ್ರಾಮದ ತುಳಸಿ ಗೌಡ ಹಾಲಕ್ಕಿ ಜನಾಂಗದ ಮುಗ್ಧತೆಯನ್ನೇ ಹಾಸಿ ಹೊದ್ದವರು . ಹೆಚ್ಚು ಮಾತನಾಡದ ಅವರು ಹೊನ್ನಳ್ಳಿ ಸಸ್ಯಪಾಲನ ಕೇಂದ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಸಮಯ ಸಸಿಗಳೊಂದಿಗೆ ಮಾತಾಡುತ್ತಾ, ಸಸಿಗಳ ಪೋಷಣೆ ಮಾಡುತ್ತಾ, ಅವನ್ನು ನೆಟ್ಟು ಮರವಾಗಿ ಬೆಳಸುವತ್ತಾ ಅವರ ಚಿತ್ತ ನೆಟ್ಟಿತ್ತು. ಪ್ರತಿ ವರ್ಷ ಮೂವತ್ತು ಸಾವಿರ ಸಸಿ ಬೆಳೆಸಿ ಪೋಷಿಸಿದ ಕೀರ್ತಿ ಅವರದ್ದು. ಹಾಗೆ ಕಾಡಿನಿಂದ ಅಪರೂಪದ ಬೀಜ ಸಂಗ್ರಹಿಸಿ, ನೆಟ್ಟು ಸಸಿ ಮಾಡಿ, ಅದೇ ಸಿಸಿಗಳನ್ನು ಅರಣ್ಯದಲ್ಲಿ ಬೆಳಸಿದ ಕೀರ್ತಿ ಅವರದ್ದು. ಅವರ ಶ್ರದ್ಧೆ , ಅರಣ್ಯ ಪ್ರೀತಿ ನೋಡಿದ ಅರಣ್ಯಾಧಿಕಾರಿಗಳು ,ಅವರನ್ನು ಅರಣ್ಯೀಕರಣ ಮತ್ತು ಸಸ್ಯಪಾಲನೆಗೆ ಬಳಸಿಕೊಂಡರು. ಅವರ ಕಾಡಿನ ಜ್ಞಾನವನ್ನು ಅರಣ್ಯಾಧಿಕಾರಿಗಳಿಗೆ ಮತ್ತು ಗಾರ್ಡ ಗಳಿಗೆ ಹಂಚಿದರು.
ಪದ್ಮಶ್ರೀ ಪ್ರಶಸ್ತಿ ಹುಡುಕಿ ಬಂದಿತ್ತು:
ತುಳಸಿ ಗೌಡರ ಅರಣ್ಯ ಪ್ರೀತಿ ಕಂಡ ಕೇಂದ್ರ ಸರ್ಕಾರ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸುಕ್ರಿ ಬೊಮ್ಮ ಗೌಡರ ನಂತರ ಪದ್ಮಶ್ರೀ ಪಡೆದ ಹಾಲಕ್ಕಿ ಜನಾಂಗದ ಎರಡನೇ ಮಹಿಳೆ ಎಂಬ ಗೌರವ ತುಳಸಿ ಗೌಡರಿಗೆ ಇತ್ತು. ವೇದಿಕೆಯಲ್ಲಿ ಎಂದು ಭಾಷಣ ಮಾಡದ ತುಳಸಿ ಅವರು ಅರಣ್ಯದೊಂದಿಗೆ ಮಾತ್ರ ಮಾತನಾಡುತ್ತಿದ್ದರು. ಸದ್ದಿಲ್ಲದೆ ಸಾಧನೆ ಮಾಡಿದ ಮಹಿಳೆ ತುಳಸಿ ಯೌವ್ವನ ಕಾಲದಲ್ಲಿ ಪತಿಯನ್ನಹ ಕಳೆದು ಕೊಂಡು, ಎರಡು ಪುಟ್ಟ ಮಕ್ಕಳ ಬೆಳೆಸುತ್ತಾ, ದಿನಗೂಲಿಯಾಗಿ ಸಸ್ಯಪಾಲನ ಕೇಂದ್ರದಲ್ಲಿ ಕೆಲಸ ಮಾಡಿದರು.ಕೊನೆಯತನಕ , ಅರವತ್ತು ವರ್ಷ ದಾಟಿದರೂ , ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿದರು. ಅರಣ್ಯ ಕಾಪಾಡಿದರು. ಹಾಗಾಗಿ ಅವರನ್ನು ವೃಕ್ಷ ಮಾತೆ ಎಂದು ಕರೆಯಲಾಯಿತು. ಎರಡು ಮಕ್ಕಳು , ನಾಲ್ಕು ಜನ ಮೊಮ್ಮಕ್ಕಳು, ಅಪಾರ ಅಭಿಮಾನಿಗಳು ಹಾಗೂ ಪಶ್ಚಿಮ ಘಟ್ಟದ ಅರಣ್ಯ, ಸಹ್ಯಾದ್ರಿ ಸರಮಾಲೆಯ ಪರ್ವತಗಳನ್ನು ಬಿಟ್ಟು , ಕಾಣದ ಲೋಕಕ್ಕೆ ತುಳಸಿ ಪಯಣ ಬೆಳಸಿದ್ದಾರೆ.
…..