ಚುನಾವಣೆಗೆ ಸಿದ್ದರಾಗಿ ಆಗಸ್ಟ್’ನಲ್ಲಿ ಕೇಂದ್ರ ಸರ್ಕಾರ ಪತನವಾಗಲಿದೆ: ಲಾಲು ಪ್ರಸಾದ್ ಯಾದವ್

ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರದ ಎನ್ ಡಿಎ ಸರ್ಕಾರದ ಬಗ್ಗೆ ಭವಿಷ್ಯ ಹೇಳಿದ್ದಾರೆ. ಮುಂದಿನ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರವು ಪತನಗೊಳ್ಳಲಿದೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಆರ್‌ಜೆಡಿಯ 28 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಯಾದವ್, ಸಂಭಾವ್ಯ ಮುಂದಿನ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ಸದಸ್ಯರಿಗೆ ಕರೆ ನೀಡಿದರು.

“ಎಲ್ಲಾ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಲು ನಾನು ಮನವಿ ಮಾಡುತ್ತೇನೆ, ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ. ಆಗಸ್ಟ್ ವೇಳೆಗೆ ಅದು ಪತನವಾಗಬಹುದು” ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ತಂದೆಯ ಮಾತುಗಳನ್ನು ಅನುಮೋದಿಸಿ, ಲಾಲು ಅವರ ಮಗ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಕೂಡ ಬಿಹಾರದಲ್ಲಿ ಶೀಘ್ರ ವಿಧಾನಸಭಾ ಚುನಾವಣೆಯ ಸಾಧ್ಯತೆಯನ್ನು ಸೂಚಿಸಿದ್ದಾರೆ. ಡಿಸೆಂಬರ್ 2024 ಅಥವಾ 2025 ರಲ್ಲಿ ಚುನಾವಣೆ ನಡೆದರೂ ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾಗುವ ಸಾಧ್ಯತೆಯನ್ನು ಅವರು ಒತ್ತಿ ಹೇಳಿದರು.

ಪಾಟ್ನಾದ ಆರ್‌ ಜೆಡಿ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು. ಔರಂಗಾಬಾದ್ ಸಂಸದ ಮತ್ತು ಲೋಕಸಭೆಯಲ್ಲಿ ಆರ್‌ಜೆಡಿ ಸಂಸದೀಯ ಪಕ್ಷದ ನಾಯಕ ಅಭಯ್ ಕುಶ್ವಾಹ ಅವರು ತೇಜಸ್ವಿ ಯಾದವ್ ಅವರಿಗೆ ಬೆಳ್ಳಿ ಕಿರೀಟವನ್ನು ತೊಡಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಪಕ್ಷದ ಸದಸ್ಯರು ಜಾಗರೂಕರಾಗಿರಬೇಕು ಮತ್ತು ಯಾವುದೇ ರಾಜಕೀಯ ಬೆಳವಣಿಗೆಗಳಿಗೆ ಸಿದ್ಧರಾಗಿರಬೇಕು ಎಂದು ಒತ್ತಿ ಹೇಳಿದರು.

Latest Indian news

Popular Stories