ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಶಾಸಕ ಬಸನಗೌಡ ದದ್ದಲ್ ಮತ್ತು ಮಾಜಿ ಸಚಿವ ಬಿ. ನಾಗೇಂದ್ರ ಮನೆ ಮೇಲೆ ED ದಾಳಿ

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಯಚೂರಿನ ಆಶಾಪುರ ರಸ್ತೆಯಲ್ಲಿರುವ ವಾರ್ಡ್ ಸಂಖ್ಯೆ 2, ಆರ್‌ಆರ್ (ರಾಮ್ ರಹೀಮ್) ಕಾಲೊನಿಯಲ್ಲಿರುವ ದದ್ದಲ್​ ಮನೆಯ ಮೇಲೆ ದಾಳಿ ನಡೆಸಿರುವ ಮೂವರು ಅಧಿಕಾರಿಗಳ ತಂಡ, ಬೆಳಗ್ಗೆ 7 ಗಂಟೆಯಿಂದ ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಬಳ್ಳಾರಿಯ ನೆಹರು ಕಾಲೊನಿಯಲ್ಲಿರುವ ಬಿ.ನಾಗೇಂದ್ರ ಮನೆ ಮೇಲೂ ಬೆಳಗ್ಗೆ 3ರಿಂದ 4 ಅಧಿಕಾರಿಗಳಿದ್ದ ತಂಡ ದಾಳಿ ಮಾಡಿದೆ. ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ‌ ಅಧಿಕಾರಿಗಳು, ನಾಗೇಂದ್ರರ ಮನೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದಾರೆ. ಸ್ಥಳೀಯ ಪೊಲೀಸರ ನೆರವು ಪಡೆಯದ ಇಡಿ, ಸಿಆರ್​ಪಿಎಫ್‌ ಯೋಧರ ಸಹಕಾರದಿಂದ ದಾಳಿ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ರಾಮ್ಕ್ವ್ ಅಪಾರ್ಟ್ಮೆಂಟ್​ನಲ್ಲಿರುವ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದೇ ರೀತಿ ಬಸವನಗೌಡ ದದ್ದಲ್ ನಿವಾಸವಲ್ಲದೆ, ಬೆಂಗಳೂರು ನಗರದ ಯಲಹಂಕ, ಕೋರಮಂಗಲ ಸೇರಿದಂತೆ ಏಕಕಾಲದಲ್ಲಿ 18 ಕಡೆಗಳಲ್ಲಿ ದಾಳಿ ಮಾಡಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಇದರ ಜೊತೆಗೆ ನಿಗಮದ ಎಂಡಿ ಜೆ.ಜೆ.ಪದ್ಮನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಮೇಲೂ ದಾಳಿ ನಡೆಸಲಾಗಿದೆ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಪದ್ಮನಾಭ್ ನಿವಾಸ, ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ್ ವರ್ಮಾ ನಿವಾಸ ಕಚೇರಿ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ಏಕಕಾಲಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories