ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಆಲಗೂರ ಕಣಕ್ಕೆ

ವಿಜಯಪುರ : ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಂತಿಮಗೊಂಡಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅವರಿಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ದಲಿತ ಸಂಘರ್ಷ ಸಮಿತಿ ಮೂಲಕ ಹೋರಾಟ, ಉಪನ್ಯಾಸಕ ವೃತ್ತಿ ಹೀಗೆ ಹಲವಾರು ರೀತಿಯ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರೊ.ರಾಜು ಆಲಗೂರ ಈಗ ಲೋಕಸಭೆ ಚುನಾವಣೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ದಲಿತ ಸಂಘರ್ಷ ಸಮಿತಿ ಯುವ ಹುಲಿ ಎಂದೇ ಹೆಸರಾಗಿದ್ದ ರಾಜು ಆಲಗೂರ ಅವರು ದಲಿತ ಹೋರಾಟದ ಮುಂಚೂಣಿ ನಾಯಕರಾಗಿದ್ದರು.

1985 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಪದವಿ ಪಡೆದ ಪ್ರೊ. ರಾಜು ಆಲಗೂರ ಅವರು ಬಿಎಲ್.ಡಿ.ಇ. ಸಂಸ್ಥೆಯ ಅಥರ್ಗಾ ಪಿಯು ಕಾಲೇಜ್ ಉಪನ್ಯಾಸಕನಾಗಿ ವೃತ್ತಿ ಜೀವನ ಆರಂಭಿಸಿದರು.
ಆದರೆ ಅವರಲ್ಲಿ ಹೋರಾಟಗಾರ ಇನ್ನೂ ಜಾಗೃತ ವಾಗಿಯೇ ಇದ್ದ, 1989 ರಲ್ಲಿ ಅವಿಭಜಿತ ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಸಾರಥ್ಯ ಸಹ ಪ್ರೊ. ರಾಜು ಆಲಗೂರ ವಹಿಸಿಕೊಂಡರು. ಆಗ ಅಜಾತಶತ್ರು ಎಂದೇ ಹೆಸರಾಗಿದ್ದ ದಿ.ಬಿ.ಎಂ. ಪಾಟೀಲರು ಪ್ರೊ.ಆಲಗೂರ ಅವರ ಸಂಘಟನಾ ಶಕ್ತಿ, ಜನಪರ‌ ಕಾಳಜಿಯನ್ನು ಅಪಾರವಾಗಿ ಮೆಚ್ಚಿ ರಾಜಕೀಯ ಜೀವನಕ್ಕೆ ಪ್ರವೇಶವನ್ನು ಮಾಡುವಂತೆ ಪ್ರೋತ್ಸಾಹಿಸಿದರು. ಈ ನಡುವೆ ಆಗ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ ಡಾ.ಎಂ.ಬಿ. ಪಾಟೀಲ ಅವರು ರಾಜು ಆಲಗೂರ ಅವರನ್ನು ರಾಜಕೀಯಕ್ಕೆ ಕರೆ ತಂದರು. ದಿ.ಬಿ.ಎಂ. ಪಾಟೀಲ ಹಾಗೂ ಡಾ.ಎಂ.ಬಿ. ಪಾಟೀಲ ಅವರನ್ನು ತಮ್ಮ ಎರಡು ಕಣ್ಣು ಹಾಗೂ ಗುರು ಎಂದು ಭಾವಿಸುವ ಪ್ರೊ.ರಾಜು ಆಲಗೂರ 1999 ರಲ್ಲಿ ಬಳ್ಳೊಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ನಂತರ 2004 ರಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಅನುಭವಿಸಿ, 2014 ರಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಸಾಬೂನು ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ನಂತರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಪ್ರೊ.ರಾಜು ಆಲಗೂರ ನಾಗಠಾಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಯ ನಿರಾಕರಿಸಿದರು. ಆದರೆ ಬದಲಾದ ಕಾಲಘಟ್ಟದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಪರಿಣಾಮವಾಗಿ ವಿಜಯಪುರ ಲೋಕಸಭಾ ಟಿಕೆಟ್ ಜೆಡಿಎಸ್ ಪಾಲಾಯಿತು. ಆದರೂ ಸಹ ಪಕ್ಷಕ್ಕಾಗಿ ಪ್ರೊ.ರಾಜು ಆಲಗೂರ ಹಗಲಿರುಳು ಪ್ರಚಾರ ಮಾಡಿದರು.

ನಂತರ 2023 ರ ಚುನಾವಣೆಯಲ್ಲಿ ಪುನಃ ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಇಂಗಿತ ವ್ಯಕ್ತಪಡಿಸಿದರು. ಆದರೆ ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದ ವಿಠ್ಠಲ ಕಟಕದೊಂಡ ಅವರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಪ್ರೊ.ರಾಜು ಆಲಗೂರ ಒಪ್ಪಿಕೊಂಡರು. ಪರಿಣಾಮ ಎರಡು ಬಾರಿ ತ್ಯಾಗದ ಫಲ ಎಂಬಂತೆ ಈ ಬಾರಿ ಲೋಕಸಭೆ ಟಿಕೆಟ್ ಪ್ರೊ.ಆಲಗೂರ ಅವರಿಗೆ ದಕ್ಕಿದೆ.

Latest Indian news

Popular Stories