ಕರ್ನಾಟಕದಲ್ಲಿ ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಪರಿಶೀಲನೆಗಾಗಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡಿದರು. ಜಿಲ್ಲೆಯ ರೈತರ ಅಹವಾಲುಗಳನ್ನು ಸ್ವೀಕರಿಸುವ ಮುನ್ನ ಮಾತನಾಡಿದ ಅವರು, ಕೇಂದ್ರ ಸರ್ಕಾರವು ‘ವಕ್ಫ್ ಕಾಯ್ದೆಗೆ-2024’ಕ್ಕೆ ತಿದ್ದುಪಡಿ ತರಲು ಹೊರಟಿದೆ. ಕರ್ನಾಟಕದಲ್ಲಿನ ಸಮಸ್ಯೆಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ನನ್ನ ಗಮನ ಸೇಳೆದಿದ್ದರು. ದೆಹಲಿ ರೀತಿಯಲ್ಲಿ ರಾಜ್ಯದಲ್ಲಿ ಕೂಡ ರೈತರು ವಕ್ಫ್ ಬೋರ್ಡ್ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು.
ರಾಜ್ಯದ ರೈತರ ಸಮಸ್ಯೆಗಳನ್ನು ಆಲಿಸುವುದಕ್ಕೆಂದೇ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ರೈತರು ದಶಕಗಳ ಕಾಲ ಉಳಿಮೆ ಮಾಡಿದ ಜಮೀನುಗಳನ್ನು ವಕ್ಫ್ ಬೋರ್ಡ್ ಏಕಾಏಕಿ ತನ್ನದೆಂದು ಹೇಳುತ್ತಿದೆ. ರೈತರು ತಮ್ಮ ಆಸ್ತಿ ಪತ್ರದ ವಿವರಗಳನ್ನು ತಂದಿದ್ದಾರೆ. ರೈತರ ಹೆಸರಲ್ಲಿರು ಭೂ ದಾಖಲೆ ವಿವರ ನೀಡುತ್ತಿದ್ದಾರೆ. ಇನ್ನೂ ರೈತರ ಅಹವಾಲು ಸ್ವೀಕರಿಸುತ್ತೇನೆ ಎಂದರು.
ಕಳೆದ 60-70 ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂಮಿ ಮೇಲೆ ವಕ್ಫ್ ಬೋರ್ಡ ಹಕ್ಕು ಸಾಧಿಸಲು ಹೊರಟಿದೆ. ಹೀಗಾಗಿ ರೈತರು ಪ್ರತಿಭಟಿಸುತ್ತಿದ್ದಾರೆ. ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದು, ವಿಜಯಪುರ ಜಿಲ್ಲೆಗೂ ಭೇಟಿ ನೀಡುತ್ತಿದ್ದೇನೆ. ಕೇವಲ ರೈತರ ಕೃಷಿ ಭೂಮಿ ಮಾತ್ರವಲ್ಲ, ಪ್ರಾಚ್ಯವಸ್ತು ಇಲಾಖೆಯ ಪಾರಂಪರಿಕ ತಾಣಗಳನ್ನು ಸಹ ವಕ್ಫ್ ತನ್ನದೆಂದು ಪ್ರತಿಪಾದಿಸುತ್ತಿದೆ. ಈ ಬಗ್ಗೆ ಸಹ ಮಾಹಿತಿ ಪಡೆಯಲಿದ್ದೇನೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸತ್ಯಾಸತ್ಯತೆ ತಿಳಿದು ವರದಿ ನೀಡುತ್ತೇನೆ ಎಂದು ಜಗದಾಂಬಿಕಾ ಪಾಲ್ ಹೇಳಿದರು.