ಜಲವಿವಾದ; ಯಾವುದೇ ರಾಜ್ಯಕ್ಕೆ ಅನ್ಯಾಯವಾಗಲು ಪ್ರಧಾನಿ- ನಾನು ಅವಕಾಶ ನೀಡಲ್ಲ: ಕೇಂದ್ರ ಸಚಿವ ಸೋಮಣ್ಣ

ತುಮಕೂರು: ಅಂತಾರಾಜ್ಯ ನದಿ ವಿವಾದ ಮತ್ತು ಮತ್ತಿತರ ವಿಚಾರಗಳಲ್ಲಿ ನಾನು ಮತ್ತು ಪ್ರಧಾನಿ ನರೇಂದ್ರ ಮೋದಿ ಯಾವುದೇ ರಾಜ್ಯವನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಶುಕ್ರವಾರ ಹೇಳಿದ್ದಾರೆ.

ದಕ್ಷಿಣದ ಎರಡು ರಾಜ್ಯಗಳ ನಡುವೆ ಅಂತರರಾಜ್ಯ ಜಲ ವಿವಾದ ಹಾಗೆ ಉಳಿದಿರುವುದರಿಂದ ಸೋಮಣ್ಣ ಅವರ ನೇಮಕವು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ತಮಿಳುನಾಡಿನಲ್ಲಿ ಕೆಲವರು ಎತ್ತಿದ ವಿರೋಧಕ್ಕೆ ಸೋಮಣ್ಣ ಪ್ರತಿಕ್ರಿಯಿಸಿದರು.

ಕರ್ನಾಟಕದ ಸೋಮಣ್ಣ ಅವರು ತುಮಕೂರು ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸೋಮಣ್ಣ ಅವರನ್ನು ಜಲಶಕ್ತಿ ಸಚಿವರನ್ನಾಗಿ ಮಾಡಿರುವುದರ ವಿರುದ್ಧ ತಮಿಳುನಾಡು ಕಾಂಗ್ರೆಸ್ ಸಮಿತಿ ನಿರ್ಣಯವನ್ನು ಅಂಗೀಕರಿಸಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವಾರು ಜಲ ವಿವಾದಗಳಿರುವುದರಿಂದ ಅಲ್ಲಿನ ರೈತ ಸಂಘಗಳು ಅವರ ನೇಮಕವನ್ನು ವಿರೋಧಿಸಿದ್ದವು.

‘ಒಕ್ಕೂಟ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದೇ ಕುಟುಂಬ, ಅದು ತಮಿಳುನಾಡು, ಕರ್ನಾಟಕ, ಪುದುಚೇರಿ ಅಥವಾ ಕೇರಳ ಆಗಿರಲಿ… ತಮಿಳುನಾಡು ಹಕ್ಕುಗಳಿಗಾಗಿ ಪ್ರತಿಪಾದಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಾವೆಲ್ಲರೂ ಸಮಾನವಾಗಿ ಬದುಕಬೇಕು. ದೇಶದ ಜನಸಂಖ್ಯೆ ಹೆಚ್ಚಿದೆ ಮತ್ತು ಪ್ರಧಾನಿ ಮೋದಿ ದೇಶದ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ. ಜಲ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಸೋಮಣ್ಣ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ನಾನು ಒಬ್ಬನೇ… ಮಹಾನ್ ವ್ಯಕ್ತಿ ಅಲ್ಲ (ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು). ಎಲ್ಲ ಪಕ್ಷಗಳು ಒಟ್ಟಾಗಿ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ. ವಿವಾದಗಳನ್ನು ಎದುರಿಸಲು ಕಾನೂನುಗಳಿವೆ’ ಎಂದು ಅವರು ಹೇಳಿದರು.

1994 ಮತ್ತು 1999ರ ನಡುವೆ ಕರ್ನಾಟಕದಲ್ಲಿ ಜನತಾದಳ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಸೋಮಣ್ಣ, ಜೆ ಜಯಲಲಿತಾ ತಮಿಳುನಾಡು ಸಿಎಂ ಆಗಿದ್ದಾಗ ಅಂದಿನ ಕರ್ನಾಟಕದ ಸಿಎಂ ಜೆಎಚ್ ಪಟೇಲ್ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರೊಂದಿಗೆ ರಾಜ್ಯ ವಿವಾದಗಳ ಬಗ್ಗೆ ಮಧ್ಯಂತರ ಮಾತುಕತೆ ನಡೆಸಿದ್ದನ್ನು ನೆನಪಿಸಿಕೊಂಡರು.

ಕೇಂದ್ರ ಸಚಿವರಾದ ನಂತರ ರಾಜ್ಯಕ್ಕೆ ತಮ್ಮ ಚೊಚ್ಚಲ ಭೇಟಿಯ ವೇಳೆ ಸೋಮಣ್ಣ ಅವರು ತುಮಕೂರಿನ ಸಿದ್ದಗಂಗಾ ಮಠ ಸೇರಿದಂತೆ 10ಕ್ಕೂ ಹೆಚ್ಚು ಧಾರ್ಮಿಕ ಸಂಸ್ಥೆಗಳಿಗೆ ಭೇಟಿ ನೀಡಿದರು.

Latest Indian news

Popular Stories