ವಯನಾಡಿನಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಇತ್ತೀಚಿನ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ 400 ರ ಗಡಿ ದಾಟಿದೆ. ನೂರಾರು ಮಂದಿ ಇನ್ನೂ ಕೂಡ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರ ಹುಡುಕಾಟದಲ್ಲಿ NDRF, SDRF ನೊಂದಿಗೆ ಸ್ಥಳೀಯ ಸಂಘಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಇನ್ನು ಕರ್ನಾಟಕದಿಂದ ತುರ್ತು ಸಂದರ್ಭದಲ್ಲಿ ಕಾರ್ಯಾಚರಿಸುವ ಸರಕಾರೇತರ ಸಂಸ್ಥೆಯಾದ ಜಮಾಅತೆ ಇಸ್ಲಾಮಿ ಹಿಂದ್ ಸೇವಾ ವಿಭಾಗವಾದ HRS ವಯನಾಡಿಗೆ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದೆ.
ಈ ಕುರಿತು ಎಚ್.ಆರ್.ಎಸ್ ಕ್ಯಾಪ್ಟನ್ ಅಮೀರ್ ಕುದ್ರೋಳಿ ದಿ ಹಿಂದುಸ್ತಾನ್ ಗಝೆಟ್ ನೊಂದಿಗೆ ಮಾತನಾಡಿ, “ಸಾವಿನ ಸಂಖ್ಯೆ 400 ರ ಗಡಿ ದಾಟಿದೆ. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದು ಅವರ ಹುಡುಕಾಟದ ಪ್ರಯತ್ನದಲ್ಲಿದ್ದೇವೆ. ಭೂಕುಸಿತದಿಂದಾಗಿ ಎಲ್ಲೆಡೆ ಹೂಳು ತುಂಬಿಕೊಂಡಿದ್ದು ರಕ್ಷಣಾ ಕಾರ್ಯ ಸವಾಲಿನಿಂದ ಕೂಡಿದೆ. ಕರ್ನಾಟಕದಿಂದ ಎಚ್.ಆರ್.ಎಸ್ ನ ಮೊದಲ ತಂಡ ಆಗಮಿಸಿದ್ದು ಮುಂದಿನ ದಿನಗಳಲ್ಲಿ ಪುನರ್ವಸತಿ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಮತ್ತಷ್ಟು ಎಚ್.ಆರ್.ಎಸ್ ಸ್ವಯಂ ಸೇವಕರು ಕೈ ಜೋಡಿಸಲಿದ್ದಾರೆ” ಎಂದರು.
ಉಡುಪಿ,ಮೈಸೂರು, ಕೊಡಗು,ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಕಡೆಯ HRS ಸ್ವಯಂ ಸೇವಕರು ವಯನಾಡಿಗೆ ತೆರಳಿದ್ದಾರೆಂದು ಅಮೀರ್ ಮಾಹಿತಿ ನೀಡಿದರು.
ಎಚ್.ಆರ್.ಎಸ್ ವತಿಯಿಂದ ಧನ ಸಂಗ್ರಹಿಸಿ ಸಹಾಯ ಮಾಡುವ ಕುರಿತು ಚಿಂತಿಸಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ಕಾರ್ಯಕರ್ತರು ತೊಡಗಿಕೊಂಡಿದ್ದಾರೆ. ಸಾರ್ವಜನಿಕರು ಸಂತ್ರಸ್ಥರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಬೇಕೆಂದು ವಿನಂತಿಸಿದ್ದಾರೆ.