ನವದೆಹಲಿ: ರಾಜ್ಯ ಬಜೆಟ್ ಮಂಡಿಸಿದ ಬಳಿಕ ಕೇಂದ್ರ ಸರ್ಕಾರದಿಂದ ಹಣಕಾಸು ನೆರವಿನಲ್ಲಿ ಮತ್ತು ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಚಲೋ ದಿಲ್ಲಿ ಪ್ರತಿಭಟನೆಗೆ ಮುನ್ನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯ ಬಜೆಟ್ ಮಂಡನೆಯ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ. ಬಜೆಟ್ ಕೂಡ ಒಂದು ಶ್ವೇತಪತ್ರವೇ ಆಗಿದೆ. ಆದರೂ ನಾವು ಶ್ವೇತಪತ್ರ ಹೊರಡಿಸುತ್ತೇವೆ ಎಂದು ಹೇಳಿದರು.
ಯುಪಿಎ ಅವಧಿಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂಬ ಬಿಜೆಪಿ ಸರ್ಕಾರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೆಯೇ ಸೆಸ್, ಸರ್ಚಾರ್ಜ್ ಬಗ್ಗೆಯೂ ಹೊರಡಿಸಲಿ ಎಂದರು.
ಕರ್ನಾಟಕದಲ್ಲಿ ಬರಗಾಲ ಇದೆ. ಐದು ತಿಂಗಳಾದರೂ ಕೇಂದ್ರ ಸರ್ಕಾರ ಇದುವರೆಗೂ ಹಣ ನೀಡಿಲ್ಲ. ನಮ್ಮ ಸಚಿವರು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿಯಾದರು. ನಾನೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಆಗ ಅಮಿತ್ ಶಾ, ಡಿಸೆಂಬರ್ 23 ರಂದು ಸಭೆ ಕರೆದು ನಿರ್ಧಾರ ತೆಗೆದುಕೊಳ್ತೀನಿ ಅಂದರು. ಆದರೆ ಇದುವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದರು.