ಬಜರಂಗದಳ ಮಸೀದಿಗೆ ದಾಳಿ ಮಾಡುವಾಗ ನಾವು ಏನು ಮಾಡಬೇಕು? ಪೊಲೀಸರನ್ನು ಪ್ರಶ್ನಿಸಿದ ರಿಯಾಝ್ ಕಡಂಬು

ಮಂಗಳೂರು: ಶುಕ್ರವಾರ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಕೆಲವರು ಮಸೀದಿಯ ಹೊರಗಡೆ ನಮಾಝ್ ಮಾಡಿದ್ದನ್ನೇ ಸಂಘಪರಿವಾರ ವಿವಾದ ಮಾಡಿದ್ದು, ಘಟನೆಯನ್ನು ಖಂಡಿಸುವ ಭರದಲ್ಲಿ ಮುಂದಿನ‌ ಶುಕ್ರವಾರ ಇದೇ ರೀತಿ ಮುಂದುವರಿದರೆ ಮಸೀದಿಗೆ ನುಗ್ಗಿ ನಮಾಝ್ ನಿಲ್ಲಿಸುತ್ತೇವೆ ಎಂದು ಶರಣ್ ಪಂಪ್‌ವೆಲ್ ಹೇಳಿದ್ದರು. ಈ ರೀತಿಯಾಗಿ ಸಂಘ ಪರಿವಾರ ದಾಳಿಗೆ ಬರುವಾಗ ನಾವೇನು ಮಾಡಬೇಕು ಎಸ್.ಡಿ.ಪಿ.ಐ. ನಾಯಕ ರಿಯಾಝ್ ಕಡಂಬು ಪೊಲೀಸರನ್ನು ಪ್ರಶ್ನಿಸಿದ್ದಾರೆ.


ಮಂಗಳವಾರ ನಗರದಲ್ಲಿ ಎಸ್.ಡಿ.ಪಿ.ಐ. ವತಿಯಿಂದ ನಡೆಸ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರತಿರೋಧ ಅಪರಾಧವಲ್ಲ. ಅದಕ್ಕೆ ಸಂವಿಧಾನವೇ ಅವಕಾಶ ಕೊಡುತ್ತದೆ. ಒಂದು ವೇಳೆ ಸಂಘಪರಿವಾರ ದಾಳಿಗೆ ಬಂದರೆ ನಾವು ಕೈಕಟ್ಟಿ ಕೂರುವುದಿಲ್ಲ ಎಂದು ಉಡುಪಿಯಲ್ಲಿ ನಾನು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೆ. ಅದಕ್ಕೆ ಮಂಗಳೂರಿನ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ನಾವು ಹೋರಾಟದಿಂದಲೇ ಬಂದವರು. ಇಂತಹ ನೋಟಿಸ್ ಗೆ ಹೆದರಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.


ಕಾಂಗ್ರಸ್‌ಗೆ ಕೇವಲ ಮುಸ್ಲಿಮರ ಮತವಷ್ಟೇ ಬೇಕಿದೆ. ಕಾಂಗ್ರೆಸ್‌ನ ಕೆಲ ಮುಸ್ಲಿಂ ನಾಯಕರು ಕಾಂಗ್ರೆಸ್ ಎಸೆದ ಬಿಸ್ಕತ್ತಿಗೆ ಬಲಿಯಾಗಿದೆ. ಈ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.


ಫಾಝಿಲ್‌ನನ್ನು ಕೊಂದದ್ದು ನಾನೇ ಎಂದು ಶರಣ್ ಪಂಪ್‌ವೆಲ್ ಬಹಿರಂಗವಾಗಿ ಹೇಳಿದ್ದ. ಆಗ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರೇ ಎಂದು ಪ್ರಶ್ನಿಸಿದ ರಿಯಾಝ್ ಕಡಂಬು ಪ್ರಕರಣ ದಾಖಲಾಗುವುದು ಕೇವಲ ಮುಸ್ಲಿಮರ ಮೇಲೆ ಮಾತ್ರ ಎಂದು ಆರೋಪಿಸಿದರು.


ದ್ವಿಮುಖ ನೀತಿಯಿಂದ ಕಾಂಗ್ರೆಸ್ ಕೂಡಾ ಹೊರತಾಗಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಹಲವು ಮುಸ್ಲಿಂ ಅಮಾಯಕ ರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಆರೋಪಿಸಿದರು.


ಅಝಾನ್, ಹಿಜಾಬ್ ವಿಷಯದಲ್ಲಿ ರಾಜಕೀಯ ಮಾಡಿ ರಾದ್ಧಾಂತ ಮಾಡಿದ ಬಿಜೆಪಿ ನಾಯಕರು ಇಂದು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ನಮಾಝ್ ವಿಚಾರಕ್ಕೆ ಕೈ ಹಾಕಿದರೂ ಇದೇ ಪರಿಸ್ಥಿತಿ ಆಗುತ್ತದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ.ನ ಅನ್ವರ್, ಆನಂದ ಮಿತ್ತಬೈಲ್ ಮತ್ತಿತರರು ಇದ್ದರು.

Latest Indian news

Popular Stories