ನೀವು ಆದರ್ಶ ತಂದೆ ಆಗಬಾರದೇಕೆ? ಅಪ್ಪನ ವಿರುದ್ಧ ನಿಶಾ ಯೋಗೇಶ್ವರ್ ಆಕ್ರೋಶ, ವಿಡಿಯೋ ವೈರಲ್

ರಾಮನಗರ: ನನ್ನ ತಂದೆ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ನನ್ನ ಕಾರ್ಯಗಳನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದ ನಿಶಾ ಯೋಗೇಶ್ವರ್ ಇದೀಗ ತಂದೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಿಶಾ ಯೋಗೇಶ್ವರ್ ಅವರು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತಂದೆ ಹೆಸರು ತೆಗೆದು ನೀವು ಯಾವ ಕೆಲಸ ಬೇಕಾದರೂ ಮಾಡಿ. ಯೋಗೇಶ್ವರ್ ಇಲ್ಲವಾದರೆ ನಿಮ್ಮ ಅಸ್ತಿತ್ವ ಇಲ್ಲ ಎಂದು ಕಮೆಂಟ್ ಗಳು ಬಂದಿದ್ದವು. ಇದಕ್ಕೆ ನಿಶಾ ಯೋಗೇಶ್ವರ್ ಉತ್ತರ ನೀಡಿದ್ದಾರೆ.

ಯೋಗೇಶ್ವರ್ ಅವರ ಮೊದಲ ಹೆಂಡತಿ ಮಗಳಾಗಿರುವುದರಿಂದ ಅವರ ಮನೆಯಲ್ಲಿ ನನಗೆ ಸ್ಥಾನವಿಲ್ಲ. ತನ್ನ ಚಿಕ್ಕಮ್ಮ ಯಾವತ್ತೂ ನನಗೆ ಅಮ್ಮನಾಗಲಿಲ್ಲ. ಮಲತಾಯಿ ಬಿಡಿ, ಸಾರ್ವಜನಿಕ ಬದುಕಿನಲ್ಲಿರುವ ತನ್ನ ತಂದೆಯೇ ಆದರ್ಶ ಅಪ್ಪ ಆಗಲಿಲ್ಲ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ನಿಶಾ ಯೋಗೇಶ್ವರ್, ನನಗೆ 10 ವರ್ಷ ಇದ್ದಾಗಲೇ ನಮ್ಮ ತಂದೆ ನಮ್ಮನ್ನು ಬಿಟ್ಟು ಹೋದರು. ಸೀತೆ 14 ವರ್ಷ ವನವಾಸ ಅನುಭವಿಸಿದರೆ ನಾನು ಬರೋಬ್ಬರಿ 24 ವರ್ಷಗಳ ಕಾಲ ತಂದೆಯನ್ನು ಕಾಣದೆ ಬದುಕಬೇಕಾಯಿತು. ತಂದೆ ದೂರವಾದ 24 ವರ್ಷದ ಬಳಿಕ ಅವರನ್ನು ನೋಡುತ್ತಿದ್ದೇನೆ. ಇದೀಗ ಚುನಾವಣೆ ಸಮಯದಲ್ಲಿ ಬಂದು ಕರೆಯುತ್ತಿದ್ದರು. ಮನೆ ಮನೆಗೆ ತೆರಳಿ ತಂದೆ ಯೋಗೇಶ್ವರ್ ಪರ ಮತಯಾಚಿಸುತ್ತಿದ್ದೆ. ನಾನು ಅಪ್ಪನಿಗಾಗಿ ಆದರ್ಶ ಮಗಳಾದೆ. ಆದರೆ ಅವರು ಆದರ್ಶ ತಂದೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೀನು ಅವರಿಗೆ ಆದರ್ಶ ಮಗಳಲ್ಲ. ನೀನು ನಿನ್ನ ತಂದೆ ಹೆಸರು ತೆಗೆದು ಹಾಕಬೇಕು ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಕಮೆಂಟ್ ಮಾಡುತ್ತಿರೋರು ತಂದೆ ಹೆಸರು ಹೇಗೆ ತೆಗೆಯೋದು ಅಂತ ಹೇಳಿ’ ಎಂದು ಸವಾಲು ಹಾಕಿದ್ದಾರೆ.

Latest Indian news

Popular Stories