ಯಾದವರು, ಮುಸ್ಲಿಮರು ನನ್ನಿಂದ ಯಾವುದೆ ಸಹಾಯ ನಿರೀಕ್ಷಿಸಬೇಡಿ: ಜೆಡಿಯು ಸಂಸದನ ವಿವಾದ

ಪಾಟ್ನ: ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಸಂಸದ ದೇವೇಶ್ ಚಂದ್ರ ಠಾಕೂರ್ ಯಾದವರು, ಮುಸ್ಲಿಮರು ತಮ್ಮಿಂದ ಯಾವುದೇ ಸಹಾಯ ನಿರೀಕ್ಷಿಸಬಾರದು ಎಂದು ಹೇಳಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮುಸ್ಲಿಮರು ಹಾಗೂ ಯಾದವರು ಮತ ಹಾಕಿಲ್ಲ ಆದ್ದರಿಂದ ತಮ್ಮಿಂದ ಈ ಎರಡೂ ಸಮುದಾಯದವರು ಯಾವುದೇ ಸಹಾಯ ನಿರೀಕ್ಷಿಸಬಾರದು ಎಂದು ಸೀತಾಮರ್ಹಿ ಸಂಸದರು ಹೇಳಿದ್ದಾರೆ.

ಎನ್ ಡಿಎ ಮೈತ್ರಿಕೂಟದ ಸಾಂಪ್ರದಾಯಿಕ ಮತದಾರರು ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳದತ್ತ ಆಕರ್ಷಿತರಾದರು ಎಂದೂ ಸಂಸದರು ಆರೋಪಿಸಿದ್ದಾರೆ. ಬಿಹಾರ ವಿಧಾನಪರಿಷತ್ ನ ಅಧ್ಯಕ್ಷರಾಗಿದ್ದ ಠಾಕೂರ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 55,000 ಮತಗಳಿಂದ ಗೆದ್ದು ಸಂಸತ್ ಗೆ ಮೊದಲ ಬಾರಿ ಪ್ರವೇಶಿಸಿದ್ದಾರೆ.

“ನಾನು ಸೂರಿಸ್ (ಮೀನುಗಾರ ಸಮುದಾಯ) ಮತ್ತು ಕಲ್ವಾರ್‌ಗಳ ಮತಗಳನ್ನು ಪಡೆದಿಲ್ಲ. ಕುಶ್ವಾಹಗಳು ಸಹ ನನ್ನನ್ನು ತೊರೆದರು. ಗೌರವಾನ್ವಿತ ಲಾಲು ಪ್ರಸಾದ್ (ಆರ್‌ಜೆಡಿ ವರಿಷ್ಠ) ಅನೇಕ ಕುಶ್ವಾಹಗಳಿಗೆ ಟಿಕೆಟ್ ನೀಡಿದ ಕಾರಣಕ್ಕಾಗಿ. ಬೇರೆಡೆಯಿಂದ ಆಯ್ಕೆಯಾದ ಕುಶ್ವಾಹ ಸದಸ್ಯರು ನನ್ನ ಕ್ಷೇತ್ರದಲ್ಲಿರುವ ಆ ಸಮುದಾಯಕ್ಕೆ ಏನಾದರೂ ಸಹಾಯ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.

ನಂತರ, “ಯಾದವರು ಮತ್ತು ಮುಸ್ಲಿಮರು ನನ್ನಿಂದ ಯಾವುದೇ ಸಹಾಯವನ್ನು ನಿರೀಕ್ಷಿಸಬಾರದು ಎಂದು ನಾನು ಸ್ಪಷ್ಟಪಡಿಸಿದ್ದೇನೆ, ಅವರು ನನ್ನನ್ನು ಭೇಟಿಯಾದಾಗ ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು, ಚಹಾ ಮತ್ತು ತಿಂಡಿಗಳನ್ನು ಸಹ ನೀಡಲಾಗುವುದು. ಆದರೆ ನಾನು ಅವರ ಯಾವುದೇ ಸಮಸ್ಯೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

“ನನ್ನ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಕಾರಣಕ್ಕೆ ನೀವು ನನಗೆ ಮತ ಹಾಕದಿರುವಾಗ ನಾನು ನಿಮಗಾಗಿ ಕೆಲಸ ಮಾಡಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ ಎಂದು ನಾನು ಮುಸ್ಲಿಂ ಸಹೋದರನನ್ನು ಕೇಳಿದ್ದೆ” ಎಂದು ಠಾಕೂರ್ ಈ ಹಿಂದೆ ಹೇಳಿದ್ದರು.

Latest Indian news

Popular Stories