ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಮೇ 30ರಂದು ರಾಜ್ಯಾದ್ಯಂತ ಹೋರಾಟ

ಹಾಸನ : ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ದಾಖಲಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸ ಬೇಕು ಎಂದು ಆಗ್ರಹಿಸಿ ಇದೇ ತಿಂಗಳ 30 ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಶನಿವಾರ ಇಲ್ಲಿನ ಕಸಾಪ ಭವನದಲ್ಲಿ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟ ನಡೆಸಿದ ರಾಜ್ಯಮಟ್ಟದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕರ್ನಾಟಕ ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಯಿತು.

ರಾಜ್ಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಬೇಕು ಎಂದು ಕರೆ ಕೊಡಲಾಯಿತು. ವಿವಿಧ ಜನಪರ, ರೈತ, ಕಾರ್ಮಿಕ, ಯುವಜನ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದವು.

ಪ್ರಜ್ವಲ್ ರೇವಣ್ಣ ಬಂಧನ ಆಗಬೇಕು. ಜೊತೆಯಲ್ಲೇ ಸಂತ್ರಸ್ತ ಮಹಿಳೆಯರ ಘನತೆ ರಕ್ಷಣೆ ಆಗಬೇಕು. ಇದಕ್ಕಾಗಿ ರಾಜ್ಯವ್ಯಾಪಿ ಬೃಹತ್ ಚಳುವಳಿ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಹತ್ತು ಹಲವು ಸಂಘಟನೆಗಳ ನೂರಾರು ಮುಖಂಡರು, ಹೋರಾಟಗಾರರು, ಚಿಂತಕರು, ಸಾಹಿತಿಗಳು ಭಾಗಿಯಾಗಿದ್ದರು.

ಹಿರಿಯ ವಕೀಲರಾದ ವೆಂಕಟೇಶ್ ಮಾತನಾಡಿ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತನಗಿರುವ ರಾಜಕೀಯ ಅಧಿಕಾರ, ರಾಜ್ಯದ ಪ್ರಮುಖ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆ ಮತ್ತು ತನಗಿರುವ ಪ್ರಬಲ ಜಾತಿಯ ಹಿನ್ನೆಲೆಯನ್ನು ಬಳಸಿಕೊಂಡು ನೂರಾರ ಮಹಿಳೆಯರ ಮೇಲೆ ಪ್ರಭಾವ ಬೀರಿ ಮತ್ತು ಒತ್ತಡ ಹಾಕಿ ಅವರನ್ನು ತನ್ನ ವಿಕೃತ ಲೈಂಗಿಕ ದಾಹಕ್ಕೆ ಬಳಸಿಕೊಂಡು ಅವರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ಮತ್ತು ಮಹಿಳೆಯರೊಂದಿಗೆ ನಡೆಸಿರುವ ನಗ್ನ ವೀಡಿಯೊ ಸಂಭಾಷಣೆಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವೀಡಿಯೊಗಳನ್ನು, ಫೋಟೊಗಳನ್ನು, ವೀಡಿಯೊ ಕಾಲ್ ಸ್ಟೀನ್ ಶಾಟ್‌ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಶೇಖರಿಸಿಟ್ಟುಕೊಂಡಿರುವ ಪ್ರಕರಣ ಈ ಹಿಂದೆ ಯಾರೂ ಎಲ್ಲಿಯೂ ಕಂಡು ಕೇಳರಿಯದ ಅತ್ಯಂತ ಹೀನ ಮತ್ತು ನೀಚ ಕೃತ್ಯವಾಗಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ವೀಡಿಯೊಗಳು ಮತ್ತು ಚಿತ್ರಗಳನ್ನು ಪೆನ್ ಡ್ರೈವ್ ಮತ್ತು ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಾರ್ವಜನಿಕವಾಗಿ ಹಂಚುವ ಮೂಲಕ ಮಹಿಳೆಯರ ಘನತೆಯ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ತ್ವರಿತ ಬಂಧನ, ವಿಚಾರಣೆ ಹಾಗೂ ಶಿಕ್ಷೆಯನ್ನು ಖಾತ್ರಿಗೊಳಿಸಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ, ಅವರಿಗೆ ಆಪ್ತ ಸಮಾಲೋಚನೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ನೀಡುವಂತೆ ಒತ್ತಾಯಿಸಿದರು
ಪ್ರಜ್ವಲ್ ರೇವಣ್ಣ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಈ ಮೊದಲೇ ತಿಳಿದಿದ್ದರೂ ಕೂಡ 2024ರ ಲೋಕಸಭಾ ಚುನಾವಣೆಯಲ್ಲಿ ಆತನನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿ ಚುನಾವಣೆ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆ ತೀವ್ರ ಖಂಡನೀಯವಾದುದು. ಪೆನ್‌ಡ್ರೈವ್ ತನ್ನಬಳಿ ಇದೆ ಎಂದು ಹೇಳಿಕೊಂಡಿದ್ದ ಜಿ. ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಆಶ್ಲೀಲ ವೀಡಿಯೊಗಳು ಮತ್ತು ಅಶ್ಲೀಲ ಚಿತ್ರಗಳು ಹಂಚಿಕೆಯಾಗದಂತೆ ತಡೆಯುವುದರಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ ಎಂದರು.

ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಬಿಜೆಪಿಯ ನಡೆ ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ. ತನ್ನದೇ ಪಕ್ಷದ ಮುಖಂಡ ಪ್ರಜ್ವಲ್ ರೇವಣ್ಣ ಇಂತಹ ಕೃತ್ಯ ನಡೆಸಿರುವುದು ಅಧಿಕೃತವಾಗಿ ತಿಳಿದಿದ್ದರೂ ಕೂಡ ಮೌನವಾಗಿರುವುದನ್ನು ನೋಡಿದರೆ, ಬಿಜೆಪಿಗೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಕ್ಕಿಂತ ಜೆಡಿಎಸ್ ಮೈತ್ರಿಯಿಂದ ಆಗಬಹುದಾದ ರಾಜಕೀಯ ಲಾಭವಷ್ಟೇ ಮುಖ್ಯವಾಗಿರುವುದು ಸ್ಪಷ್ಟ. ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ಬಂಧಿಸಲು ಕೇಂದ್ರ ಸರಕಾರ ಅನುಸರಿಸಲೇಬೇಕಾದ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸದೆ ಕೇವಲ ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ.

ಜೆಡಿಎಸ್ ಮತ್ತು ಬಿಜೆಪಿ ಇಡೀ ಪ್ರಕರಣದ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಾ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಒತ್ತಡ ಹೇರುತ್ತಿವೆ. ಕಾಂಗ್ರೆಸ್ ಕೂಡ ಬಿಜೆಪಿ ಮತ್ತು ಜೆಡಿಸ್ ಜೊತೆಗೆ ಕೆಸರೆರಚಾಟದಲ್ಲಿ ತೊಡಗಿದ್ದು, ಪ್ರಕರಣದ ಗಂಭೀರತೆಗೆ ಧಕ್ಕೆ ಉಂಟಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿರುವ ದೌರ್ಜನ್ಯಕ್ಕೊಳಗಾಗಿರುವ ನೂರಾರು ಮಹಿಳೆಯರ ವಿಷಯ ಪಕ್ಕಕ್ಕೆ ಸರಿಯುತ್ತಿದೆ.

ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಜೆಡಿಎಸ್‌ನ ಮಹಿಳಾ ನಾಯಕಿಯರು ಮತ್ತು ಪ್ರಮುಖ ಕಾರ್ಯಕರ್ತೆಯರೂ ಜೊತೆಗೆ ಮಹಿಳಾ ಅಧಿಕಾರಿಗಳು, ನೌಕರರು ಮತ್ತು ವೃತ್ತಿಪರರು ಇರುವುದರಿಂದ ಮುಂದೆ ಮಹಿಳೆಯರು ನೇರವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪಾಲ್ಗೊಳ್ಳುವ ಕುರಿತು ಬಹಳ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕುರಿತೂ ನಾವು ಆಲೋಚಿಸಬೇಕಿದೆ ಎಂದು ಬೇಸರವ್ಯಕ್ತಪಡಿಸಿದರು.

Latest Indian news

Popular Stories