ನಾವು ಅಕ್ಕಿ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರತಿ ಕಿಲೋಗೆ ಕನಿಷ್ಠ 22.50 ರೂ.ಗೆ ಅಕ್ಕಿ ನೀಡಲು ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ನಮ್ಮಿಂದ ಅಕ್ಕಿ ಖರೀದಿಸುತ್ತಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಹೇಳಿದ್ದಾರೆ

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ರಾಜ್ಯ ಸರ್ಕಾರ ಕೇಂದ್ರದಿಂದ ಅಕ್ಕಿ ಖರೀದಿಸಿದರೆ ವಾರ್ಷಿಕವಾಗಿ 2,280 ಕೋಟಿ ರೂ. ಉಳಿತಾಯವಾಗುತ್ತದೆ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಿಂದ ಅಕ್ಕಿ ಖರೀದಿಸಲು ಸಿದ್ಧವಿಲ್ಲ ಎಂದರು.

ರಾಜ್ಯದ ಜನರಿಗೆ 10 ಕಿಲೋ ಅಕ್ಕಿನೂ ಸಿಗುತ್ತಿಲ್ಲ ಮತ್ತು 5 ಕಿಲೋ ಧಾನ್ಯ ಪಡೆಯಲು ಸಹ ಕಷ್ಟಪಡುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ರಾಜ್ಯ ಸರ್ಕಾರ ಕೇಂದ್ರದಿಂದ 10 ರೂ. ರಿಯಾಯಿತಿಯನ್ನು ತಿರಸ್ಕರಿಸಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಪ್ರಸ್ತುತ ಪ್ರತಿ ಕಿಲೋಗ್ರಾಂಗೆ 34 ರೂ.ಗಳಿಗೆ ಅಕ್ಕಿ ಖರೀದಿಸುತ್ತಿದೆ. ಆದರೆ ಕೇಂದ್ರ ಸರ್ಕಾರವು ಪ್ರತಿ ಕಿಲೋಗೆ 22.50 ರೂ.ಗಳ ಕಡಿಮೆ ಬೆಲೆಯಲ್ಲಿ ಅಕ್ಕಿ ನೀಡಲು ಸಿದ್ಧವಿದ್ದರೂ ರಾಜ್ಯವು ಅದನ್ನು ಖರೀದಿಸಲು ನಿರಾಕರಿಸಿದೆ ಎಂದು ಜೋಶಿ ತಿಳಿಸಿದರು.

ರಾಜ್ಯ ಸರ್ಕಾರವು ಈ ದರದಲ್ಲಿ ಅಕ್ಕಿ ಖರೀದಿಸಿದರೆ, ವಾರ್ಷಿಕವಾಗಿ 2,280 ಕೋಟಿ ರೂ. ಉಳಿಸಬಹುದು ಎಂದು ಜೋಶಿ ಒತ್ತಿ ಹೇಳಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಅವಕಾಶವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದರು.

ರಾಜ್ಯ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ದುಡ್ಡು ಕೊಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ ಎಂದು ಜೋಶಿ ಟೀಕಿಸಿದರು.

ಗೃಹಲಕ್ಷ್ಮೀ ಹಣ ಬಂದಿಲ್ಲ, ಅನ್ನಭಾಗ್ಯ ಅಕ್ಕಿನೂ ಬಂದಿಲ್ಲ. ನಾವು ಅಕ್ಕಿ ಕೊಡುತ್ತೇವೆ ಎಂದರೂ ರಾಜ್ಯ ಸರ್ಕಾರ ಖರೀದಿಸ್ತಿಲ್ಲ. ಇದೀಗ ಅಕ್ಕಿಯೂ ನೀಡ್ತಿಲ್ಲ, ಹಣವೂ ನೀಡ್ತಿಲ್ಲ. ನಮ್ಮ ಬಳಿ ಅಕ್ಕಿ ಇದೆ ಎಂದು ಜೂನ್ ತಿಂಗಳಿನಲ್ಲೇ ಹೇಳಿದ್ದೇನೆ. ಈಗ 22 ರೂ.ಗೆ ಕೊಡುತ್ತೇವೆ ಎಂದರೂ ಖರೀದಿಸ್ತಿಲ್ಲ. ಸಚಿವ ಮುನಿಯಪ್ಪ ಭೇಟಿ ಮಾಡಿ ಹೋದರೂ ಅಕ್ಕಿ ಆರ್ಡರ್ ಮಾಡಿಲ್ಲ. ಯಾಕೆಂದರೆ ಖರೀದಿಸಲು ಅವರ ಬಳಿ ದುಡ್ಡಿಲ್ಲ ಎಂದು ಜೋಶಿ ಟೀಕಿಸಿದರು.

Latest Indian news

Popular Stories