ಕಂದಾಹಾರ್:ದರೋಡೆ ಹಾಗೂ ವಿಕೃತಕಾಮದ ಆರೋಪದಲ್ಲಿ ಬಂಧಿಸಲ್ಪಟ್ಟ ಒಂಬತ್ತು ಮಂದಿ ಆರೋಪಿಗಳಿಗೆ ಅಫ್ಘಾನಿಸ್ತಾನ್ ತಾಲಿಬಾನ್ ಬಹಿರಂಗವಾಗಿ ಶಿಕ್ಷೆ ವಿಧಿಸಿರುವ ಘಟನೆ ಮಂಗಳವಾರ (ಜನವರಿ 17) ನಡೆದಿರುವುದಾಗಿ ವರದಿಯಾಗಿದೆ.
ಕಂದಹಾರ್ ನ ಅಹ್ಮದ್ ಶಾಹಿ ಸ್ಟೇಡಿಯಂನಲ್ಲಿ ದರೋಡೆ ಮತ್ತು ವಿಕೃತಕಾಮ ಆರೋಪದಲ್ಲಿ ಒಂಬತ್ತು ಮಂದಿಯನ್ನು ಶಿಕ್ಷಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಟೋಲೋ ನ್ಯೂಸ್ ಟ್ವೀಟ್ ಮಾಡಿದೆ.
ಬಹಿರಂಗ ಸ್ಥಳದಲ್ಲಿ ನಾಲ್ಕು ಮಂದಿಯ ಕೈ ಕತ್ತರಿಸಲಾಗಿದ್ದು, ಉಳಿದ ಐದು ಆರೋಪಿಗಳಿಗೆ 35ರಿಂದ 39 ಚಾಟಿ ಏಟು ನೀಡಲಾಗಿದೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ಹಾಜಿ ಝೈದ್ ತಿಳಿಸಿರುವುದಾಗಿ ವರದಿ ಹೇಳಿದೆ.
ತಾಲಿಬಾನ್ ಇಂದು ಕಂದಹಾರ್ ನ ಫುಟ್ಬಾಲ್ ಸ್ಟೇಡಿಯಂನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ನಾಲ್ವರ ಕೈಗಳನ್ನು ಕತ್ತರಿಸಿದೆ. ಅಫ್ಘಾನಿಸ್ತಾನದಲ್ಲೀಗ ತಾಲಿಬಾನ್ ಯಾವುದೇ ವಿಚಾರಣೆ ಇಲ್ಲದೇ ಅಮಾನವೀಯ ಶಿಕ್ಷೆ ವಿಧಿಸುವ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಬ್ರಿಟನ್ ನಲ್ಲಿರುವ ಅಫ್ಘಾನಿಸ್ತಾನದ ಮಾಜಿ ರಾಜನೀತಿ ಸಲಹೆಗಾರ್ತಿ ಶಬ್ನಮ್ ನಶಿಮಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯದ ಖಂಡನೆಯ ನಡುವೆಯೂ ತಾಲಿಬಾನ್ ಆರೋಪಿಗಳನ್ನು ಸಾರ್ವಜನಿಕವಾಗಿ ಹತ್ಯೆಗೈಯುವುದು, ಕೈ ಕತ್ತರಿಸುವುದು, ಚಾಟಿ ಏಟಿನ ಶಿಕ್ಷೆಯನ್ನು ಮುಂದುವರಿಸಿರುವುದಾಗಿ ವರದಿ ವಿವರಿಸಿದೆ.