ಅಲ್-ಖಾದಿರ್ ಟ್ರಸ್ಟ್ (Al-Qadir Trust Case) ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್‌ನ (Islamabad High Court)ವಿಭಾಗೀಯ ಪೀಠವು ಶುಕ್ರವಾರ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ (Imran Khan) ಜಾಮೀನು ಮಂಜೂರು ಮಾಡಿದೆ. ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಅವರ ಬಂಧನವನ್ನು ಅಮಾನ್ಯ ಮತ್ತು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಘೋಷಿಸಿದ ಒಂದು ದಿನದ ನಂತರ ಖಾನ್ ಅವರಿಗೆ ಜಾಮೀನು ಸಿಕ್ಕಿದೆ. ಇಸ್ಲಾಮಾಬಾದ್ ಹೈಕೋರ್ಟ್‌ನ ವಿಭಾಗೀಯ ಪೀಠವು ಶುಕ್ರವಾರ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್‌ಗೆ ಎರಡು ವಾರಗಳ ಜಾಮೀನು ನೀಡಿದೆ. ಖಾನ್ ಪರ ವಕೀಲರಾದ ಬಾಬರ್ ಅವನ್, ಪಿಟಿಐ ಮುಖ್ಯಸ್ಥರು ಈಗ ಸ್ವತಂತ್ರ ವ್ಯಕ್ತಿ, ನಿರ್ಧಾರವು ನ್ಯಾಯಯುತವಾಗಿದೆ ಎಂದು ಹೇಳಿದರು.
ಇಮ್ರಾನ್ ಖಾನ್‌ಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಪಿಎಂ ಶೆಹಬಾಜ್ ಷರೀಫ್ ಅವರ ಪಕ್ಷ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ದೇಶಾದ್ಯಂತ ಪ್ರತಿಭಟನಾ ರ್ಯಾಲಿಗಳನ್ನು ನಡೆಸುವುದಾಗಿ ಘೋಷಿಸಿದೆ.
ಇಮ್ರಾನ್ ಖಾನ್‌ಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಇಂಥಾ ದ್ವಂದ್ವ ನಿಲುವು ಪಾಕಿಸ್ತಾನದಲ್ಲಿ ನ್ಯಾಯದ ಸಾವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಫೆಡರಲ್ ಕ್ಯಾಬಿನೆಟ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಮತ್ತು ಫೆಡರಲ್ ಒಕ್ಕೂಟದ ಇತರ ಸದಸ್ಯರ ಬಂಧನಗಳನ್ನು ಉಲ್ಲೇಖಿಸಿ ಅಂಥಾ ವಿನಾಯಿತಿ ಅವರಿಗೆ ನೀಡಲಾಗಿಲ್ಲ ಎಂದು ಕೇಳಿದರು. ನವಾಜ್ ಅನುಭವಿಸಿದ ಅನ್ಯಾಯದ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದಿದ್ದಾರೆ ಶೆಹಬಾಜ್.
ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಮತ್ತು ಅವರ ಪಕ್ಷ ಸುಳ್ಳುಗಾರರು.ತನ್ನ ಸರ್ಕಾರವನ್ನು ಪದಚ್ಯುತಗೊಳಿಸಲು ಯುಎಸ್ ಪಿತೂರಿ ನಡೆಸುತ್ತಿದೆ ಎಂಬ ಇಮ್ರಾನ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಒಂದಕ್ಕಿಂತ ಹೆಚ್ಚು ರಾಷ್ಟ್ರೀಯ ಭದ್ರತಾ ಸಮಿತಿಯಲ್ಲಿ ಅವರ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ ಎಂದಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಇಮ್ರಾನ್ ಖಾನ್ನ್ನು ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧಿಸಲಾಗಿದೆ. ಖಾನ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಪಂಜಾಬ್‌ನ ಝೀಲಂನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಯುನಿವರ್ಸಿಟಿಯೊಂದನ್ನು ಸ್ಥಾಪಿಸುವ ಭರವಸೆ ನೀಡಿದ್ದರು.ವರದಿಗಳ ಪ್ರಕಾರ ಖಾನ್, ಅವರ ಪತ್ನಿ ಬುಶ್ರಾ ಬೀಬಿ ಮತ್ತು ಆಪ್ತ ಸಹಾಯಕರಾದ ಜುಲ್ಫಿಕರ್ ಬುಖಾರಿ ಮತ್ತು ಬಾಬರ್ ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ತನ್ನ ಭರವಸೆಯನ್ನು ಪೂರೈಸುವ ಸಲುವಾಗಿ, ಖಾನ್ ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಅದರಲ್ಲಿ ಬೀಬಿ, ಬುಖಾರಿ ಮತ್ತು ಅವನ್ ಅವರನ್ನು ಪದಾಧಿಕಾರಿಗಳಾಗಿ ಮಾಡಿದ್ದಾರೆ.
ಆದಾಗ್ಯೂ, ಆಗಿನ ಪಿಟಿಐ ಸರ್ಕಾರ ಮತ್ತು ಆಸ್ತಿ ಉದ್ಯಮಿ ನಡುವೆ ಒಪ್ಪಂದ ಮಾಡಿದ್ದು, ಇದು ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳ ನಷ್ಟವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.
ಆರೋಪಗಳ ಪ್ರಕಾರ, ಖಾನ್ ಮತ್ತು ಇತರ ಆರೋಪಿಗಳು ಆ ಸಮಯದಲ್ಲಿ ರೂ50 ಬಿಲಿಯನ್ (ಆ ಕಾಲದಲ್ಲಿ 190 ಮಿಲಿಯನ್ ಪೌಂಡ್) ಅವ್ಯವಹಾರ ನಡೆಸಿದ್ದಾರೆ ಎಂದು ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಸಂಸ್ಥೆ (ಎನ್‌ಸಿಎ) ಸರ್ಕಾರಕ್ಕೆ ಹೇಳಿದೆ ಎಂದು ದಿ ನ್ಯೂಸ್ ಇಂಟರ್‌ನ್ಯಾಶನಲ್ ವರದಿ ಮಾಡಿದೆ.
ಅಲ್ ಖಾದಿರ್ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಸೊಹಾವಾದ ಮೌಜಾ ಬಕ್ರಾಲಾದಲ್ಲಿ 458 ಎಕರೆಗೂ ಹೆಚ್ಚು ಭೂಮಿ ರೂಪದಲ್ಲಿ ಅನಗತ್ಯ ಲಾಭವನ್ನು ಪಡೆದ ಆರೋಪವೂ ಅವರ ಮೇಲಿದೆ.