ಸಿಡ್ನಿ: ಆಸ್ಟ್ರೇಲಿಯಾ ಬೀಚ್ ನಲ್ಲಿ 2 ಹೆಲಿಕಾಪ್ಟರ್ ಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗೋಲ್ಡ್ ಕೋಸ್ಟ್‌ನ ಉತ್ತರದ ಬೀಚ್‌ನ ಮೇನ್ ಬೀಚ್‌ನಲ್ಲಿರುವ ಸೀ ವರ್ಲ್ಡ್ ಥೀಮ್ ಪಾರ್ಕ್ ಬಳಿ ಈ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್ ಗಳು ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದಾರೆ ಮತ್ತು 3 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಗೋಲ್ಡ್ ಕೋಸ್ಟ್ ಕಡಲ ತೀರದ ಬಳಿ ಎರಡು ಹೆಲಿಕಾಪ್ಟರ್ಗಳ ನಡುವೆ ಘರ್ಷಣೆ ಉಂಟಾದ ನಂತರ 1 ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಮತ್ತೊಂದು ಹೆಲಿಕಾಪ್ಟಪ್ ಪೈಲಟ್ ನಿಯಂತ್ರಣ ತಪ್ಪಿ ಪತನವಾಗಿದೆ. ಘಟನೆಯಲ್ಲಿ ಕಾಪ್ಟರ್ ನಲ್ಲಿದ್ದ 4 ಜನರು ಸಾವನ್ನಪ್ಪಿದ್ದಾರೆ ಮತ್ತು 3 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕ್ವೀನ್ಸ್‌ಲ್ಯಾಂಡ್ ರಾಜ್ಯ ಪೊಲೀಸ್ ಕಾರ್ಯನಿರ್ವಾಹಕ ಇನ್ಸ್‌ಪೆಕ್ಟರ್ ಗ್ಯಾರಿ ವೊರೆಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೀಚ್ ಕ್ವೀನ್ಸ್‌ಲ್ಯಾಂಡ್ ರಾಜ್ಯದ ಬ್ರಿಸ್ಬೇನ್‌ನಿಂದ ದಕ್ಷಿಣಕ್ಕೆ 45 ಮೈಲುಗಳಷ್ಟು ದೂರದಲ್ಲಿ ಗೋಲ್ಡ್ ಕೋಸ್ಟ್ ಇದೆ. ಈ ಪ್ರದೇಶವು ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ. ಆಕಾಶದಲ್ಲಿ ಹೆಲಿಕಾಪ್ಟರ್ಗಳು ಡಿಕ್ಕಿ ಹೊಡೆದಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದ ರೋಟರ್‌ಗಳಲ್ಲಿ 1 ಮರಳಿನ ದಂಡೆಯ ಮೇಲೆ ಬಿದ್ದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ಹೆಲಿಕಾಪ್ಟರ್ ಸಮುದ್ರದ ತೀರದಿಂದ ಕೆಲವು ಅಡಿಗಳಷ್ಟು ದೂರದಲ್ಲಿ ಮರಳಿನ ಮೇಲೆ ಪಲ್ಟಿಯಾಗಿದೆ. ಇದರ ರೋಟರ್‌ಗಳು ಸ್ವಲ್ಪ ದೂರದಲ್ಲಿ ಬಿದ್ದಿವೆ.
ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಬ್ಯೂರೋ ಮುಖ್ಯ ಆಯುಕ್ತ ಆಂಗಸ್ ಮಿಚೆಲ್ ಹೇಳಿದ್ದಾರೆ.