ಆಸ್ಟ್ರೇಲಿಯಾ: ಇಸ್ಕಾನ್ ದೇವಾಲಯದ ಮೇಲೆ ದಾಳಿ – ಮೂರನೇ ಕುಕೃತ್ಯ

ಮೆಲ್ಬರ್ನ್: ಖಲಿಸ್ತಾನಿ ಉಗ್ರರಿಂದ ಆಸ್ಟ್ರೇಲಿಯದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ದಾಳಿ ಮುಂದುವರಿದಿದೆ. ಹೊಸ ಪ್ರಕರಣದಲ್ಲಿ ವಿಕ್ಟೋರಿಯಾ ಪ್ರಾಂತ್ಯದ ಮೆಲ್ಬರ್ನ್ ನ  ಆಲ್ಬರ್ಟ್‌ ಪಾರ್ಕ್‌ನಲ್ಲಿರುವ ಇಸ್ಕಾನ್‌ ಶ್ರೀಕೃಷ್ಣ ದೇಗುಲದ ಮೇಲೆ ದಾಳಿ ಮಾಡಿ ಗೋಡೆಗಳನ್ನು ಹಾಳು ಗೆಡವಿದ್ದಾರೆ. ಮಾತ್ರವಲ್ಲ “ಹಿಂದೂಸ್ತಾನ್‌ ಮುರ್ದಾಬಾದ್‌’ ಎಂದು ಬರೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ಕಾನ್‌ನ ಸಂವಹನ ವಿಭಾಗದ ನಿರ್ದೇಶಕ ಭಕ್ತ ದಾಸ್‌ “ಪೂಜಾ ಸ್ಥಳದ ಮೇಲೆ ಇಂಥ ಅತಿರೇಕದ ವರ್ತನೆಯಿಂದ ನಾವು ಆಘಾತಗೊಂಡಿದ್ದೇವೆ. ಸಿಸಿಟಿವಿ ದಾಖಲೆಗಳ ಸಹಿತ ವಿಕ್ಟೋರಿಯಾ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಹೇಳಿದ್ದಾರೆ.

ವಿಕ್ಟೋರಿಯದ ಪ್ರಾಂತ್ಯದ ಹಂಗಾಮಿ ಮುಖ್ಯಮಂತ್ರಿ ಜಸಿಂತಾ ಅಲನ್‌ ಖಂಡಿಸಿದ್ದಾರೆ. “ವಿಕ್ಟೋರಿಯದ ಎಲ್ಲರೂ ತಮ್ಮ ನಂಬಿಕೆಗಳನ್ನು ಅನುಸರಿಸಲು ಸ್ವತಂತ್ರರು. ಜನಾಂಗೀಯ ಭೇದ, ದೂರು, ದ್ವೇಷಗಳಿಲ್ಲದೇ ಎಲ್ಲರೂ ಬದುಕಲು ಅರ್ಹರು. ವೈವಿಧ್ಯತೆ ವಿಕ್ಟೋರಿಯದ ದೊಡ್ಡ ಶಕ್ತಿ. ಇಂತಹ ದಾಳಿಗಳನ್ನು ನಾವು ಟೀಕಿಸುತ್ತೇವೆ’ ಎಂದು ಹೇಳಿದ್ದಾರೆ.

ಕೇವಲ 15 ದಿನಗಳ ಅಂತರದಲ್ಲಿ ಮೂರು ದೇವಸ್ಥಾನಗಳ ಮೇಲೆ ದಾಳಿ ಮಾಡಿ ಹಾಳು ಮಾಡಲಾಗಿದೆ. ಜ.12ರಂದು ಮೆಲ್ಬರ್ನ್ ಸ್ವಾಮಿ ನಾರಾಯಣ ದೇಗುಲದ ಮೇಲೆ, ಜ.16ರಂದು ವಿಕ್ಟೋರಿಯದ ಕೇರಂ ಡೌನ್ಸ್‌ನಲ್ಲಿರುವ ಐತಿಹಾಸಿಕ ಶ್ರೀಶಿವ-ವಿಷ್ಣು ದೇಗುಲದ ಮೇಲೆ ದಾಳಿ ಮಾಡಲಾಗಿತ್ತು.

Latest Indian news

Popular Stories