ಅಂಕಾರಾ (ಟರ್ಕಿ): ಎರಡು ದಶಕಗಳಳ್ಲೇ ಭೀಕರವಾದ ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 15,000ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 2,992 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಟರ್ಕಿ-ಸಿರಿಯಾ ಭೂಕಂಪದಿಂದ ಸಾವಿನ ಸಂಖ್ಯೆ 15,000 ದಾಟಿದ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ದೃಢಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿಗಳು ಭೂಕಂಪದಿಂದ ಉಂಟಾದ ವಿನಾಶದ ಪ್ರಮಾಣವನ್ನು ಹೆಚ್ಚಿಸಿವೆ ಎಂದು ಅವರು ಹೇಳಿದ್ದಾರೆ.
ಸಿರಿಯಾದಲ್ಲಿ ಒಟ್ಟು ಸಾವಿನ ಸಂಖ್ಯೆ 2,992 ಕ್ಕೆ ತಲುಪಿದೆ. ವಾಯುವ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,730 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
2011ರಲ್ಲಿ ಜಪಾನ್ ನಲ್ಲಿ ಭೂಕಂಪನ ಹಾಗೂ ಅದರಿಂದ ಸೃಷ್ಟಿಯಾದ ಸುನಾಮಿಗೆ 20000 ಮಂದಿ ಬಲಿಯಾಗಿದ್ದರು. ಅದಾದ ನಂತರ ಕಳೆದೊಂದು ದಶಕದ ಅವಧಿಯಲ್ಲಿ ಸಂಭವಿಸಿದ ಘೋರ ಪ್ರಕೃತಿ ವಿಕೋಪ ಈ ಭೂಕಂಪವಾಗಿದೆ.
ಈ ನಡುವೆ ಭೂಕಂಪನದಿಂದಾಗಿ ನೆಲಕಚ್ಚಿರುವ ಸಹಸ್ರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜರನ್ನು ರಕ್ಷಣಾ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ರಕ್ಷಿಸಲು ಟರ್ಕಿಯಲ್ಲಿ ಅತೀವ ಪ್ರಯತ್ನ ಮುಂದುರೆಸಿದ್ದಾರೆ. ಆದರೆ, ಇಂತಹ ಸಿಬ್ಬಂದಿ ಸಂಖ್ಯೆ ಕೇವಲ 60 ಸಾವಿರದಷ್ಟಿದೆ. ಭೂಕಂಪದಿಂದ ಹಾನಿಗೆ ಒಳಗಾದ ಪ್ರದೇಶಗಳು ಅಪಾರವಾಗಿರುವುದರಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರು ನೆರವಿಗಾಗಿ ಮೊರೆ ಇಡುತ್ತಿದ್ದಾರೆ.
ಅವರ ಆಕ್ರಂದನ ಮುಗಿಲು ಮುಟ್ಟಿದೆ. ಇದೀಗ ಎರಡು ಡಜನ್ ರಾಷ್ಟ್ರಗಳಿಂದ ರಕ್ಷಣಾ ಸಿಬ್ಬಂದಿ ಟರ್ಕಿ ಹಾಗೂ ಸಿರಿಯಾಗೆ ತೆರಳಿ, ಜನರ ರಕ್ಷಣೆಗೆ ನೆರವಾಗುತ್ತಿದ್ದಾರೆ.
ಟರ್ಕಿಯಲ್ಲಿ 8.5 ಕೋಟಿ ಜನಸಂಖ್ಯೆ ಇದ್ದು, ಆ ಪೈಕಿ 1.3 ಕೋಟಿ ಜನರು ಭೂಕಂಪನದಿಂದ ಬಾಧಿತರಾಗಿದ್ದಾರೆ. 10 ಪ್ರಾಂತ್ಯಗಳಲ್ಲಿ ಟರ್ಕಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸದ್ಯ 3.8 ಲಕ್ಷ ಜನರು ಮಾತ್ರ ಸರ್ಕಾರಿ ನಿರಾಶ್ರಿತ ಕೇಂದ್ರ ಅಥವಾ ಹೋಟೆಲ್ ಗಳಲ್ಲಿ ಆಶ್ರಯ ಪಡೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.