ನವದೆಹಲಿ: ಭಾರತದ ರಾಜಕಾರಣಕ್ಕೆ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ಜಸಿಂದಾ ಆರ್ಡೆರ್ನ್ ಅವರಂತಹ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಫೆಬ್ರುವರಿ 7ರೊಳಗೆ ಉನ್ನತ ಹುದ್ದೆಯಿಂದ ಕೆಳಗಿಳಿಯುವುದಾಗಿ ಪಕ್ಷದ ಸಭೆಯಲ್ಲಿ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜೈರಾಮ್ ರಮೇಶ್, ‘ಖ್ಯಾತ ಕ್ರಿಕೆಟ್ ವಿಶ್ಲೇಷಕ, ವಿಜಯ್ ಮರ್ಚೆಂಟ್ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಿವೃತ್ತಿ ಹೊಂದುವ ಬಗ್ಗೆ ಒಮ್ಮೆ ಹೇಳಿದ್ದರು. ಆದರೆ, ಅಭಿಮಾನಿಗಳು ವಿಜಯ್ ಅವರನ್ನು ಯಾವಾಗ ನಿವೃತ್ತಿ ಹೊಂದುತ್ತೀರಿ ಎಂದು ಕೇಳಲಿಲ್ಲ. ಬದಲಿಗೆ ಏಕೆ ನಿವೃತ್ತರಾಗುತ್ತಿದ್ದೀರಿ ಎಂದು ಕೇಳಿದ್ದರು. ಇದೀಗ ಕಿವೀಸ್ ಪ್ರಧಾನಿ ಜಸಿಂದಾ ಅರ್ಡೆರ್ನ್ ಅವರು ಮರ್ಚೆಂಟ್‌ರ ನಿಯಮವನ್ನು ಅನುಸರಿಸುತ್ತಿರುವುದಾಗಿ ಹೇಳಿದ್ದಾರೆ. ಭಾರತದ ರಾಜಕೀಯಕ್ಕೆ ಜಸಿಂದಾ ಅವರಂತಹವರು ಬೇಕಾಗಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಅಚ್ಚರಿ ತಂದ ಜಸಿಂಡಾ ನಿರ್ಧಾರ
ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುತ್ತಿಲ್ಲ ಎಂದು ಜಸಿಂದಾ ಅವರು ದಿಢೀರ್ ನಿರ್ಧಾರ ಪ್ರಕಟಿಸಿದ್ದು, ಪಕ್ಷದಲ್ಲಿ ಅಚ್ಚರಿಗೆ ಕಾರಣವಾಗಿದೆ. ದೊಡ್ಡ ಜವಾಬ್ದಾರಿ ಇರುವ ಉನ್ನತ ಹುದ್ದೆಯನ್ನು ನಿರ್ವಹಿಸಲು ನನಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರಧಾನಿ ಸ್ಥಾನ ತ್ಯಜಿಸಲು ಇದು ಸೂಕ್ತ ಸಮಯ’ ಎಂದು ಜಸಿಂದಾ ಹೇಳಿದ್ದಾರೆ.
ಇದೊಂದು ದೊಡ್ಡ ಮತ್ತು ಅತ್ಯಂತ ಹೆಚ್ಚಿನ ಜವಾಬ್ದಾರಿಯುವ ಹುದ್ದೆಯಾಗಿದೆ. ಅದನ್ನು ನಿರ್ವಹಿಸುವುದು ಕೂಡ ಸುಲಭವಲ್ಲ. ಅಂತಹ ಹುದ್ದೆಗೆ ಸೂಕ್ತ ವ್ಯಕ್ತಿ ಇದ್ದರೆ ಚೆನ್ನ. ನನಗೆ ಪ್ರಧಾನಿ ಹುದ್ದೆ ನಿಭಾಯಿಸಲು, ಪದವಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಸಿಂದಾ ಹೇಳಿಕೆ ನೀಡಿದ್ದಾರೆ.
ಜಸಿಂದಾ ಅವರು 2017 ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿತ್ತು. ಅಧಿಕಾರವಧಿಯಲ್ಲಿ ಮಗುವಿಗೆ ಜನ್ಮ ನೀಡಿದ ಕೆಲವೇ ನಾಯಕರಲ್ಲಿ ಜಸಿಂದಾ ಒಬ್ಬರು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೊ ಅವರು 1990ರಲ್ಲಿ ಅಧಿಕಾರದಲ್ಲಿರುವಾಗಲೇ ಮಗುವಿಗೆ ಜನ್ಮ ನೀಡಿದ್ದರು.
ನ್ಯೂಜಿಲೆಂಡ್‌ನಲ್ಲಿ 2023ರ ಅಕ್ಟೋಬರ್ 14ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ.