ಪಾಕಿಸ್ತಾನದಲ್ಲಿ ಕಮರಿಗೆ ಉರುಳಿದ ಬಸ್‌: 28 ಮಂದಿ ಸಾವು

ಇಸ್ಲಾಮಾಬಾದ್: ‌ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಸ್‌ ಕಮರಿಗೆ ಉರುಳಿದ ಪರಿಣಾಮ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 28 ಮಂದಿ ಮೃತಪಟ್ಟಿದ್ದು, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಟರ್ಬತ್‌ನಿಂದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾಕ್ಕೆ ಹೋಗುತ್ತಿತ್ತು.

ಹೀಗೆ ಕ್ವೆಟ್ಟಾದಿಂದ ಸುಮಾರು 700 ಕಿಮೀ ದೂರದಲ್ಲಿರುವ ವಾಶುಕ್ ಪಟ್ಟಣದ ಬಳಿ ಕಮರಿಗೆ ಉರುಳಿದೆ. ಘಟನೆಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಚಾಲಕ ಅಮಿತ ವೇಗದಲ್ಲಿ ಬಸ್​ ಚಲಾಯಿಸಿರುವುದು ಅವಘಡಕ್ಕ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡದ್ದಾರೆ.

6 ಮಂದಿ ಸ್ಥಳದಲ್ಲೇ ಮೃತಪಟ್ಟರೆ, 22 ಮಂದಿ ಬಾಸಿಮಾದ ಸಿವಿಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹಾಗೂ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಹಾಯಕ ಆಯುಕ್ತ (ಎಸಿ) ಇಸ್ಮಾಯಿಲ್ ಮೆಂಗಲ್ ದೃಢಪಡಿಸಿದ್ದಾರೆ. ತಿರುವಿನಲ್ಲಿ ಬಸ್‌ನ ಟೈರ್‌ ಒಡೆದು ಬಸ್‌ ಕಂದಕಕ್ಕೆ ಉರುಳಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಗಾಯಗೊಂಡವರಿಗೆ ಸೂಕ್ತ ನೆರವು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ಅಪಘಾತದಲ್ಲಿ ಬಲಿಯಾದವರ ಕುಟುಂಬಗಳಿಗೆ ದುಃಖ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದ್ದಾರೆ.

Latest Indian news

Popular Stories