ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಢಾಕಾದಲ್ಲಿ ತುರ್ತು ಭೂಸ್ಪರ್ಶ

ನವದೆಹಲಿ: ಮುಂಬೈನಿಂದ ಗುವಾಹಟಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಶನಿವಾರ ಢಾಕಾದ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ದಟ್ಟ ಮಂಜಿನಿಂದಾಗಿ ಗುವಾಹಟಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ, ವಿಮಾನವನ್ನು ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಅನಿರೀಕ್ಷಿತ ಡೈವರ್ಟ್ ಮಾಡಲಾಗಿದೆ.

ಇಂಡಿಗೋ 6E-123 ವಿಮಾನ, ಇಂದು ಬೆಳಗ್ಗೆ 4 ಗಂಟೆಗೆ ಢಾಕಾವನ್ನು ತಲುಪಿತು. ಅಲ್ಲಿ ಪ್ರಯಾಣಿಕರು ಹೆಚ್ಚಿನ ಸೂಚನೆಗಳಿಗಾಗಿ ಕಾಯುತ್ತಿದ್ದರು. ವಿಮಾನಯಾನ ಸಂಸ್ಥೆಯು ಗುವಾಹಟಿ ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯು ಡೈವರ್ಟ್ ಮಾಡಲು ಪ್ರಾಥಮಿಕ ಕಾರಣವೆಂದು ಉಲ್ಲೇಖಿಸಿದೆ.

“ಕೆಟ್ಟ ಹವಾಮಾನದ ಕಾರಣ ಮುಂಬೈನಿಂದ ಗುವಾಹಟಿಗೆ ಆಗಮಿಸುತ್ತಿದ್ದ ಇಂಡಿಗೋ ಫ್ಲೈಟ್ 6E 5319 ಅನ್ನು ಬಾಂಗ್ಲಾದೇಶದ ಢಾಕಾಕ್ಕೆ ತಿರುಗಿಸಲಾಯಿತು. ಢಾಕಾದಿಂದ ಗುವಾಹಟಿಗೆ ವಿಮಾನ ನಿರ್ವಹಿಸಲು ಪರ್ಯಾಯ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಬದಲಾವಣೆಯ ಬಗ್ಗೆ ಮಾಹಿತಿ ನೀಡಲಾಯಿತು ಮತ್ತು ವಿಮಾನದಲ್ಲಿ ಉಪಹಾರ ನೀಡಲಾಯಿತು. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ” ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.

Latest Indian news

Popular Stories