ಹೈದರಾಬಾದ್ ಮೂಲದ ಯುವಕ ಉದ್ಯೋಗ ವಂಚನೆಯ ಜಾಲಕ್ಕೆ ತುತ್ತಾಗಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತ್ಯು!

ಹೈದರಾಬಾದ್: ಮೋಸದಿಂದ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದ್ದ ಹೈದರಾಬಾದ್‌ನ 30 ವರ್ಷದ ಯುವಕ ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾರ್ಚ್ 6 ರಂದು ತಿಳಿಸಿದ್ದಾರೆ. ಅವರನ್ನು ಸೆಕ್ಯೂರಿಟಿ ಉದ್ಯೋಗಕ್ಕೆಂದು ಕರೆದೊಯ್ದು ಯುದ್ಧಪೀಡಿತ ಪ್ರದೇಶದಲ್ಲಿ ನೇಮಿಸಲಾಗಿತ್ತು.

ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಮೃತ ಮೊಹಮ್ಮದ್ ಅಸ್ಫಾನ್ ಅವರ ಕುಟುಂಬದಿಂದ ಈ ಕುರಿತು ದೂರೊಂದು ಸ್ವೀಕರಿಸಿದ್ದರು.ಅವರನ್ನು ರಷ್ಯಾದಿಂದ ವಾಪಸು ತರಲು ಅವರಿಂದ ಸಹಾಯವನ್ನು ಕೋರಿದ್ದರು. AIMIM ಇತ್ತೀಚೆಗೆ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿತ್ತು. ಇದೀಗ ರಾಯಭಾರಿ ಕಚೇರಿ ಅಸ್ಫಾನ್ ಅವರ ಸಾವನ್ನು ದೃಢಪಡಿಸಿದೆ.

ಅಸ್ಫಾನ್ ಮತ್ತು ಇತರರನ್ನು ಏಜೆಂಟರು ದಾರಿತಪ್ಪಿಸಿ ಸುಳ್ಳು ಮಾಹಿತಿ ನೀಡಿ ಯುದ್ಧದ ಸಮಯದಲ್ಲಿ ರಷ್ಯಾದ ಮಿಲಿಟರಿಗೆ ಸಹಾಯ ಮಾಡಲು ಅವರನ್ನು ‘ಸೇನಾ ಸಹಾಯಕರು’ ಎಂದು ನೇಮಿಸಿಕೊಂಡರು. ಅವರನ್ನು ಯುದ್ಧ-ಅಲ್ಲದ ಪಾತ್ರಗಳಿಗೆ ನೇಮಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿ ನಂಬಿಸಲಾಗಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಕಳೆದ ತಿಂಗಳು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿ, ರಷ್ಯಾದ ಸೇನೆಗೆ ಸಹಾಯಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಇಪ್ಪತ್ತು ಭಾರತೀಯ ನಾಗರಿಕರನ್ನು ಬಿಡುಗಡೆಗೊಳಿಸಲು ಭಾರತ ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿತ್ತು.

Latest Indian news

Popular Stories