ಬೀದರ್: ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ

ಬೀದರ್,ಅ.13:- ಬೀದರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಬೀದರ್ ಜಿಲ್ಲೆಯಲ್ಲಿ ಅಕ್ಟೋಬರ್ 13 ರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಅಕ್ಟೋಬರ್ 13 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಪತ್ತು ನಿರ್ವಹಣಾ ಸಮಿತಿಯ ತುರ್ತು ಸಭೆ ನಡೆಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್., ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾ ಗರೀಮಾ ಪನವಾರ, ಭುವನೇಶ ಪಾಟೀಲ ಅವರ ಸಮ್ಮುಖದಲ್ಲಿ ಬೀದರ, ಬಸವಕಲ್ಯಾಣ, ಔರಾದ್, ಭಾಲ್ಕಿ, ಹುಮನಾಬಾದ್, ಕಮಲನಗರ, ಚಿಟಗುಪ್ಪಾ ಮತ್ತು ಹುಲಸೂರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 13 ಮತ್ತು 14 ಎರಡು ದಿನಗಳು ಸೇರಿ ಬೀದರ ಜಿಲ್ಲೆಯಾದ್ಯಂತ ಮುಂದಿನ ಐದು ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಬೀಳುವ ಹಾಗೂ ಗರಿಷ್ಟ ಉಷ್ಣಾಂಶ 24-28 ಸೆಲ್ಸಿಯಸ್ ಕನಿಷ್ಟ ಉಷ್ಣಾಶ 18-19 ಸೆಲ್ಸಿಯಸ್ ಇರುವ ಮತ್ತು ಪ್ರತಿ ಗಂಟೆಗೆ ಗಾಳಿಯ ವೇಗವು 3-7 ಕಿ.ಮೀ ಚಲಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದೆ. ಈ ವಿಷಯವನ್ನು ಯಾರು ಕೂಡ ಲಘುವಾಗಿ ತೆಗೆದುಕೊಳ್ಳಬಾರದು. ಪೌರಾಯುಕ್ತರು, ತಹಸೀಲ್ದಾರ, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯಾಧಿಕಾರಿಗಳು ಸೇರಿದಂತೆ ಜವಾಬ್ದಾರಿಯುತ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಸದ್ಯದ ಪರಿಸ್ಥಿತಿಯ ಸನ್ನಿವೇಶ ಅರಿತು ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿನ ಕೆರೆ ಕಟ್ಟೆಗಳಿಂದ ತುಂಬುವ ಡ್ಯಾಮಗಳಲ್ಲಿನ ನೀರನ್ನು ಗೇಟಗಳಿಂದ ಹೊರಬಿಡುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಡ್ಯಾಮ ಸುತ್ತಲಿನ ಜನರಿಗೆ ಕಡ್ಡಾಯ ಸೂಚನೆ ನೀಡಿಯೇ ನೀರು ಬಿಡಲು ಕ್ರಮವಹಿಸಬೇಕು. ಬಿಟ್ಟುಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗು ಭದ್ರತೆ ದೃಷ್ಟಿಯಿಂದ ಜಿಲ್ಲಾದ್ಯಂತ ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಬೀದರ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ 24 ಗಂಟೆಗಳ ಸಮಯ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಮೊಬೈಲ್ ಹಾಳಾಗಿದೆ ಎನ್ನುವ ಯಾವುದೇ ನೆಪ ಹೇಳಬಾರದು. ದೂರವಾಣಿ ಕರೆಗಳನ್ನು ಸ್ವೀಕರಿಸಿ ಸ್ಪಂದಿಸಬೇಕು. ಹಾನಿ ಸಂಭವಿಸಿದ ಕೂಡಲೇ ಮೇಲಧಿಕಾರಿಗಳಿಗೆ ತಿಳಿಸಿ ತುರ್ತಾಗಿ ವರದಿ ಮಾಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಇಂತಹ ತುರ್ತು ಸನ್ನಿವೇಶದಲ್ಲಿ ಸಿಬ್ಬಂದಿ ಕೂಡ ಕಾಳಜಿ ವಹಿಸಿ ಕೆಲಸ ಮಾಡಬೇಕು. ಯಾವ ಸಿಬ್ಬಂದಿ ಕೂಡ ಅನವಶ್ಯಕವಾಗಿ ರಜೆ ಮೇಲೆ ತೆರಳಬಾರದು. ಇಂತಹ ವಿಪತ್ತು ಎದುರಾದ ಸನ್ನಿವೇಶದಲ್ಲಿ ನಿರ್ಲಕ್ಷ್ಯವಹಿಸಿ ಜೀವಹಾನಿಯಾದರೆ ಪ್ರಯೋಜನವಿಲ್ಲ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಅತಿವೃಷ್ಟಿಯಿಂದಾದ ಬೆಳೆ ಹಾನಿ, ಜೀವ ಹಾನಿ ಪ್ರಕರಣಗಳಿಗೆ ವಿಳಂಬವಿಲ್ಲದೇ ಪರಿಹಾರ ಕಲ್ಪಿಸಲು ಒತ್ತು ಕೊಡಬೇಕು. ಅತಿವೃಷ್ಟಿಯಿಂದಾಗಿ ಇದುವರೆಗೆ ಸಂಭವಿಸಿದ 60 ಜಾನುವಾರ ಹಾನಿ ಪ್ರಕರಣಗಳಲ್ಲಿ 52 ಪ್ರಕರಣಗಳಿಗೆ 9.39 ಲಕ್ಷ ರೂ.ದಷ್ಟು ಪರಿಹಾರ ನೀಡಿದ್ದು, ಬಾಕಿ 8 ಪ್ರಕರಣಗಳಿಗೆ ಕೂಡಲೇ ಪರಿಹಾರ ಕಲ್ಪಿಸಲು ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಪೌರಾಯುಕ್ತರಿಗೆ ಸೂಚನೆ: ಈ ಮೊದಲೇ ತಿಳಿಸಿದ್ದರೂ ಬೀದರ ಸಿಟಿಯ ರಾಜಕಾಲುವೆಯ ಕೆಲವು ಕಡೆಗಳಲ್ಲಿ ಇದುವರೆಗೆ ಕಸ ತೆಗೆಯದೇ ಇರುವುದರಿಂದ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಮೂನ್ಸೂಚನೆ ಇರುವುದರಿಂದ ಬೀದರ ನಗರಾದ್ಯಂತ ಎಲ್ಲಾ ಕಡೆಗಳಲ್ಲಿನ ಗಟಾರುಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಲ್ಲಿನ ಕಸ ತೆಗೆಯುವ ಕಾರ್ಯಕ್ಕೆ ಮೊದಲಾದ್ಯತೆ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶರಣಬಸಪ್ಪ ಕೋಟಪ್ಪಗೋಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್., ತೋಟಗಾರಿಕೆ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.

Latest Indian news

Popular Stories