ಅಕ್ರಮ ಒಂಟೆ/ಗೋವುಗಳುಸಾಗಾಣಿಕೆ ಮತ್ತು ಹತ್ಯೆ ತಡೆಗೆ ಕ್ರಮಕೈಗೊಳ್ಳಿ:ಡಿಸಿ ಮಾಲಪಾಟಿ

ಬಳ್ಳಾರಿ,ಜು.18(ಕರ್ನಾಟಕ ವಾರ್ತೆ): ಬಕ್ರೀದ್ ಹಬ್ಬ ಮತ್ತು ಇನ್ನೀತರ ದಿನಗಳಲ್ಲಿ ಅಕ್ರಮ ಒಂಟೆ/ಗೋವುಗಳ ಸಾಗಾಣಿಕೆ ಮತ್ತು ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಪೊಲೀಸ್ ಇಲಾಖೆ ಹಾಗೂ ಆರ್‍ಟಿಒ ಅಧಿಕಾರಿಗಳು ಜಂಟಿಯಾಗಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಿ ಪ್ರತಿಯೊಂದು ವಾಹನವನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಜರುಗಿದ ಬಕ್ರೀದ್ ಹಬ್ಬ ಮತ್ತು ಮುಂತಾದ ಹಬ್ಬದ ದಿನಗಳಲ್ಲಿ ಅಕ್ರಮ ಒಂಟೆ/ಗೋವುಗಳ ಹತ್ಯೆ ಹಾಗೂ ಸಾಗಾಣಿಕೆ ತಡೆಗಟ್ಟುವುದಕ್ಕೆ ಸಂಬಂಧಿಸಿದ ಜಿಲ್ಲಾ ಸಮಿತಿ ಸಭೆಯು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಹನ ತಪಾಸಣೆಯ ಸಮಯದಲ್ಲಿ ಅನಧಿಕೃತ ಗೋವು/ಒಂಟೆಗಳ ಸಾಗಾಣಿಕೆ ಕಂಡುಬಂದಲ್ಲಿ ಪೊಲೀಸ್, ನಗರಸಭೆ ಅಧಿಕಾರಿಗಳು ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅವುಗಳ ರಕ್ಷಣೆ ಮಾಡಿ ಸಮೀಪದಲ್ಲಿರುವ ಗೋಶಾಲೆಗಳಲ್ಲಿ ಸೇರಿಸಲು ಕ್ರಮಕೈಗೊಳ್ಳಬೇಕು ಮತ್ತು ಸಂಬಂಧಿತ ಆರೋಪಿಗಳ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಬಕ್ರೀದ್ ಹಬ್ಬದ ಸಂಬಂಧ ಗೋವು/ಒಂಟೆ ಪ್ರಾಣಿವಧೆ ಸಂಬಂಧ ಕಾನೂನಿನ ಅರಿವನ್ನು ಅಲ್ಪಸಂಖ್ಯಾತರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಹಾಗೂ ಸಾರ್ವಜನಿಕರ ಜನ ಸಂದಣಿ ಇರುವ ಕಡೆ ಧ್ವನಿವರ್ಧಕಗಳ ಮುಖಾಂತರ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ಆಯುಕ್ತರಿಗೆ ಡಿಸಿ ಮಾಲಪಾಟಿ ಅವರು ತಿಳಿಸಿದರು.
ಈ ಸಂಬಂಧ ಎಲ್ಲಾ ಮಸೀದಿಗಳ ಮುಖ್ಯಸ್ಥರಿಗೆ ಹಾಗೂ ಅಂಜುಮನೆ ಇಸ್ಲಾಮಿಯಾ ಅಧ್ಯಕ್ಷರಿಗೆ ಸಭೆ ಕರೆದು ತಿಳಿಸಬೇಕು ಮತ್ತು ಈ ಸಂಬಂಧ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಲು ಸೂಚಿಸಿದರು.
ಪ್ರಾಣಿ ವಧೆಯಿಂದ ಉತ್ಪತ್ತಿಯಾಗುವ ತಾಜ್ಯ ವಿಲೇವಾರಿಯನ್ನು ಸುಸೂತ್ರವಾಗಿ ನಿರ್ವಹಿಸಿ ಮಲಿನಗೊಳ್ಳದಂತೆ ನಗರಸಭೆ ಅಧಿಕಾರಿಗಳು ಕ್ರಮವಹಿಸಬೇಕು ಮತ್ತು ನಗರಸಭೆ ಅಧಿಕಾರಿಗಳ ಜತೆಗೆ ಪರಿಸರ ಇಲಾಖೆಯ ಸಿಬ್ಬಂದಿಯವರು ಕೈಜೋಡಿಸುವಂತೆ ತಿಳಿಸಿದರು.
ಗ್ರಾಮಗಳಲ್ಲಿ ಪ್ರಾಣಿವಧೆಯ ಕಾನೂನುಗಳ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿ/ಸಿಬ್ಬಂದಿಯವರು ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಕ್ರಮವಹಿಸಿ ಮತ್ತು ಗ್ರಾಮಗಳಲ್ಲಿ ಯಾವುದಾದರೂ ಗೋಹತ್ಯೆ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲು ಡಿಸಿ ಮಾಲಪಾಟಿ ಅವರು ಸೂಚಿಸಿದರು.
ಈ ಸಂಬಂಧ ಅಕ್ರಮ ಗೋವು/ಒಂಟೆಗಳ ವಧೆ ಮಾಹಿತಿ ಇದ್ದಲ್ಲಿ, ಸಾರ್ವಜನಿಕರು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ದೂ: 08392-275146, ಮಹಾನಗರ ಪಾಲಿಕೆ ಆಯುಕ್ತರ ಮೊ: 9008418283, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೊ: 9449864034, ಪೊಲೀಸ್ ಇಲಾಖೆಯ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಲು ತಿಳಿಸಿದರು.
ತಾಲೂಕುಮಟ್ಟದಲ್ಲಿ ತಹಸೀಲ್ದಾರರು ಈ ಕುರಿತು ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರ ನಾಯಕ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಮತ್ತಿತರರು ಇದ್ದರು.

Latest Indian news

Popular Stories