ಕೂಡ್ಲಿಗಿಯಲ್ಲಿ ಸ್ವಚ್ಛತೆ ಜಾಗೃತಿ ಬೀದಿನಾಟಕ ಪ್ರದರ್ಶನಕ್ಕೆ ಚಾಲನೆ ಕರುನಾಡು ಸ್ವಯಂ ಸೇವಾ ಸಂಸ್ಥೆಯಿಂದ ಬೀದಿ ನಾಟಕ ಪ್ರದರ್ಶನ

ಬಳ್ಳಾರಿ,ಜೂ.23(ಕರ್ನಾಟಕ ವಾರ್ತೆ): ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಸ್ವಚ್ಛ ಪರಿಸರ ನಮ್ಮ ಆರೋಗ್ಯದ ಗುಟ್ಟು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕಾವಲಿ ಶಿವಪ್ಪನಾಯಕ ಹೇಳಿದರು.
ಪಟ್ಟಣದ ರಾಜವೀರ ಮದಕರಿ ವೃತ್ತದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತೆ ಕುರಿತ ಜಾಗೃತಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲೂ ನಿತ್ಯ ಕಸ ಹೊತ್ತೊಯ್ಯುವ ವಾಹನ ಸಂಚರಿಸಲಿವೆ. ಹಸಿ, ಒಣ ಕಸವನ್ನು ಬೇರ್ಪಡಿಸಿ ವಾಹನದಲ್ಲಿ ಹಾಕುವುದರಿಂದ ಪಟ್ಟಣವನ್ನು ಸುಂದರವಾಗಿ ಇಡಲು ಸಾಧ್ಯವಿದೆ. ಅಲ್ಲದೆ, ಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಬಹುದು. ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪಟ್ಟಣ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್ ಯೋಜನೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಕೂಡ್ಲಿಗಿ ಪಟ್ಟಣವನ್ನು ಸ್ವಚ್ಛ, ಸುಂದರ ಹಾಗೂ ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಸೈಯದ್ ಶುಕುರ್ ಮಾತನಾಡಿ, ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದನ್ನು ಎಲ್ಲರೂ ರೂಢಿಸಿಕೊಂಡರೆ, ಪಟ್ಟಣ, ನಗರ ಹಾಗೂ ದೇಶವನ್ನೇ ಸ್ವಚ್ಛವಾಗಿಡಲು ಸಾಧ್ಯವಾಗಲಿದೆ. ಪ್ರತಿಯೊಬ್ಬರೂ ಸ್ವಚ್ಛತೆ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಸದೃಢ ಸಮಾಜ ನಮ್ಮದಾಗಲಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಎಸ್.ದುರುಗೇಶ್ ಮಾತನಾಡಿ, ಕೂಡ್ಲಿಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಂಗಡಿಗಳಿಂದ ಕಸವನ್ನು ರಸ್ತೆಗೆ ಎಸೆಯಲಾಗುತ್ತದೆ. ದಯವಿಟ್ಟು ಯಾರೂ ಆ ರೀತಿ ಕಸ ಹರಡದೇ, ತಮ್ಮ ಅಂಗಡಿಗಳ ಮುಂದೆಯೇ ಡಬ್ಬಿಯಲ್ಲಿ ಸಂಗ್ರಹಿಸಿ ಕಸದ ವಾಹನಕ್ಕೆ ಹಾಕಬೇಕೆಂದು ಮನವಿ ಮಾಡಿದರು.
ಹುಡೇಂ ಗ್ರಾಮದ ಕರುನಾಡು ಶಿಕ್ಷಣ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಕಲಾ ತಂಡದವರಿಂದ ಸ್ವಚ್ಛತೆ ಕುರಿತು ಬೀದಿನಾಟಕವನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರಿಗೆ ಬಸ್ ನಿಲ್ದಾಣ ಎದುರು, ಹೊಸಪೇಟೆ ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನ, ಡಾ.ಬಿ.ಆರ್.ಅಂಬೇಡ್ಕರ್ ನಗರ, ಗೋವಿಂದಗಿರಿ ತಾಂಡಾ ಹಾಗೂ ಅಮರದೇವರಗುಡ್ಡದಲ್ಲಿ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ಪಿ.ಚಂದ್ರು, ದಾಣಿ ರಾಘವೇಂದ್ರ, ಪಪಂ ಆರೋಗ್ಯ ಅಧಿಕಾರಿ ರಾಜಾಬಕ್ಷಿ, ಕರುನಾಡು ಶಿಕ್ಷಣ, ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಕವಿತಾ ಕೃಷ್ಣಮೂರ್ತಿ, ಕಲಾ ತಂಡದ ಕೆಂಚಮಲ್ಲನಹಳ್ಳಿ ಸುರೇಶ, ಬಿ.ಕೆ.ಸಹನಾಮೂರ್ತಿ, ರೇಖಲಗೆರೆ ಮಲ್ಲೇಶ್, ಚಿನ್ನೋಬನಹಳ್ಳಿ ಬಾಬು, ಮಲ್ಲೂರಹಳ್ಳಿ ದುರುಗೇಶ್, ಹೊಸಪೇಟೆ ಮಂಜುಳಾ ಸೇರಿ ಇತರರಿದ್ದರು.

Latest Indian news

Popular Stories

error: Content is protected !!