ಬಾಲ ಹಿತೈಷಿ ಯೋಜನೆಯಡಿ ಅರ್ಜಿ ಆಹ್ವಾನ

ಬೀದರ, ಜೂನ್ 18 (ಕರ್ನಾಟಕ ವಾರ್ತೆ): ಕೋವಿಡ್-19 ಸೋಂಕಿನಿಂದ ಪಾಲಕ, ಪೋಷಕರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಕ್ಕಳಿಗೆ ಅವರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯಿಂದ ಹೊರಬಂದು ಮೊದಲಿನಂತೆ ಸಾಮಾನ್ಯ ಜೀವನ ನಡೆಸಲು ಅನುವಾಗುವಂತೆ ಅವರಿಗೆ ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬೆಂಬಲ ನೀಡಲು ಬಾಲ ಹಿತೈಷಿ ಯೋಜನೆಯಡಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಕ್ಕಳಿಗೆ ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಾಗೂ ವಿವಿಧ ರೀತಿಯಲ್ಲಿ ಬೆಂಬಲ ನೀಡಲು ಮುಂದೆ ಬರುವ ವ್ಯಕ್ತಿಗಳನ್ನು ಬಾಲ ಹಿತೈಷಿ ಯೋಜನೆಯಡಿ ಮಾರ್ಗದರ್ಶಕರೆಂದು ಗುರುತಿಸಿ, ಅವರಿಗೆ ಯಶಸ್ವಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲು ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲದಿಂದ ಸೂಕ್ತ ತರಬೇತಿ ನೀಡಲಾಗುವುದು.
ಕೋವಿಡ್-19 ಸಂಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರು ಅಥವಾ ಇಬ್ಬರೂ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ಸರ್ವತೋಮುಖ ಬೆಳವಣಿಗೆಗೆ ಬೆಂಬಲ ಹಾಗೂ ಸಹಾಯ ನೀಡಲು ಇದೊಂದು ಸುವರ್ಣಾವಕಾಶವಾಗಿರುತ್ತದೆ. ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವವರಿಗೆ ಇಲಾಖೆಯಿಂದ ಯಾವುದೇ ಗೌರವ ಧನ/ಶುಲ್ಕವನ್ನು ಪಾವತಿಸಲಾಗುವುದಿಲ್ಲ. ಇದೊಂದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಸರ್ಕಾರದ ಬಾಲ ಹಿತೈಷಿ ಯೋಜನೆಯಡಿ ಆಸಕ್ತರು ಮಾರ್ಗದರ್ಶಕರಾಗಿ ಸೇವೆಯನ್ನು ಸಲ್ಲಿಸಲು ಜಾಲತಾಣ www.icps.karnataka.gov.inನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಜೂನ್.26ರೊಳಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರಿಗೆ ಸಲ್ಲಿಸಬಹುದಾಗಿದೆ.
ನಿಗದಿತ ಅರ್ಜಿ ನಮೂನೆಯನ್ನು ನೇರವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಲ್ಯಾಂಡ್ ಆರ್ಮಿ ಕಛೇರಿ ಹಿಂದುಗಡೆ, ಮೈಲೂರ, ಬೀದರ ಇವರಿಂದ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ. ಸಂ. 08482-234003, 9980891432, 9886235654 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!