ಜೂನ್ 3 ರಿಂದ ಬೀದರ ಜಿಲ್ಲಾದ್ಯಂತ ಬಿತ್ತನೆ ಬೀಜ ವಿತರಣೆ ಆರಂಭ:ಪ್ರಭು ಚವ್ಹಾಣ್

ಬೀದರ ಜೂನ-1 (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಈಗಾಗಲೇ ಉತ್ತಮ ರೀತಿಯಲ್ಲಿ ಮಳೆಯಾಗಿದ್ದು, ರೈತರು ಬಿತ್ತನೆ ಮಾಡುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಜೂನ.3 ರಿಂದ ಬೀದರ ಜಿಲ್ಲೆಯಾದ್ಯಂತ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನು ಆರಂಭಿಸಲು ತಾವು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಪಶು ಸಂಗೋಪನೆ ಹಾಗೂ ಬೀದರ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದರು.
ಜೂನ್.1 ರಂದು ಹುಮನಾಬಾದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಕೋರೋನಾ ವಾರಿಯರ್ಸ್ಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ 3-4 ಮಳೆಗಳು ಉತ್ತಮವಾಗಿ ಬಿದ್ದಿವೆ. ಹೀಗಾಗಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಜೋರಾಗಿ ಸಾಗಿದೆ. ರೈತರು ಬಿತ್ತನೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ಅವರಿಗೆ ಅನುಕೂಲವಾಗುವಂತೆ ಸೋಯಾಬೀನ್ ಸೇರಿದಂತೆ ಇನ್ನೀತರ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವ ಕಾರ್ಯಕ್ರಮವು ಜೂನ.3 ರಂದು ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಏಕ ಕಾಲಕ್ಕೆ ನಡೆಯಬೇಕೆಂದು ತಾವು ಈಗಾಗಲೇ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರುಗಳಿಗೆ ಕರೆ ಮಾಡಿ ಸೂಚಿಸಿದ್ದಾಗಿ ಸಚಿವರು ಹೇಳಿದರು.
ಕೋರೋನಾ 2ನೇ ಅಲೆಯಿಂದ ಎಲ್ಲರೂ ಸಾಕಷ್ಟು ತೊಂದರೆಯಲ್ಲಿದ್ದೇವೆ. ಆದರೆ ಮಳೆ ಆಗುತ್ತಿರುವುದರಿಂದ ಬಿತ್ತನೆ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ. ಹೀಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೋವಿಡ್ ಮಾರ್ಗಸೂಚಿ ಅನುಸಾರ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲು ಅಚ್ಚುಕಟ್ಟಾಗಿ ಕ್ರಮ ವಹಿಸಬೇಕಾಗಿ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಇದೇ ವೇಳೆ ಸಚಿವರು ಹೇಳಿದರು.
ಹುಮನಾಬಾದ ತಾಲ್ಲೂಕಿನಲ್ಲಿ ಕೂಡ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಹುಮನಾಬಾದ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರಲು ಶಾಸಕರು, ತಾಲ್ಲೂಕಾ ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕರಿಸುತ್ತಿದ್ದಾರೆ ಎಂದು ಸಚಿವರು ಇದೇ ವೇಳೆ ಹೇಳಿದರು.
ಈ ಸಂದರ್ಭದಲ್ಲಿ ಹುಮನಾಬಾದ ಶಾಸಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಪ್ರಭು ಚವ್ಹಾಣ್ ಅವರು ಉತ್ಸಾಹಿ ಸಚಿವರಾಗಿದ್ದಾರೆ. ಉತ್ತಮವಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುತ್ತಾರೆ ಅಲ್ಲದೇ ಅಂತವರಿಗೆ ಸಹಾಯ ಸಹಕಾರ ಮಾಡುತ್ತಾರೆ. ಅವರ ಜನಸೇವಾ ಮನೋಭಾವಕ್ಕೆ ಕೋರೋನಾ ವಾರಿಯರ್ಸಗಳಿಗೆ ಸನ್ಮಾನ ಮಾಡುತ್ತಿರುವ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಹುಮನಾಬಾದ ಮತ್ತು ಚಿಟಗುಪ್ಪಾ ಪಟ್ಟಣಗಳವರೆಗೆ ಬಂದು ಇಲ್ಲಿ ಉತ್ತಮವಾಗಿ ಕೆಲಸ ಮಾಡುವ ಕೋರೋನಾ ವಾರಿಯರ್ಸಗಳನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಿದ್ದು ತಮಗೆ ಸಂತಷ ತಂದಿದೆ ಎಂದು ಶಾಸಕರಾದ ಪಾಟೀಲ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹುಮನಾಬಾದ ತಾಲ್ಲೂಕಿನಲ್ಲಿ 7 ಜನ ವೈದ್ಯಾಧಿಕಾರಿಗಳು, 11 ಜನ ಇನ್ನೀತರ ವೈದ್ಯರು, 4 ಜನ ಸಿಬ್ಬಂದಿ, 27 ಜನ ಶುಶ್ರೂಷಕ ಅಧಿಕಾರಿಗಳು, 3 ಫಾರ್ಮಸಿಸ್ಟ್ ಅಧಿಕಾರಿಗಳು, 5 ಆರೋಗ್ಯ ಸಹಾಯಕರು, 8 ಜನ ಪ್ರಯೋಗ ಶಾಲಾ ಸಿಬ್ಬಂದಿ, 7 ಚಾಲಕರು, 24 ಜನ ಗ್ರೂಪ ಡಿ ನೌಕರರು, 20 ಜನ ಕಂಪ್ಯೂಟರ ಆಪರೇಟರ ಸೇರಿದಂತೆ ಇನ್ನೀತರರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಸುಭಾಷ ಕಲ್ಲೂರ, ಸೋಮನಾಥ ಪಾಟೀಲ, ಹುಮನಾಬಾದ ಪುರಸಭೆಯ ಮಾಜಿ ಅಧ್ಯಕ್ಷರಾದ ಅಪ್ಸರಮಿಯ್ಯಾ, ಪುರಸಭೆಯ ಅಧ್ಯಕ್ಷರಾದ ಮಾಲಾ ಹಾಗೂ ಇನ್ನೀತರರು ಇದ್ದರು.

Latest Indian news

Popular Stories

error: Content is protected !!