ಸಂಸದರ ಅಧ್ಯಕ್ಷತೆಯಲ್ಲಿ ಬ್ಲಾಕ್ ಮಟ್ಟದ ಬ್ಯಾಂಕರ್ಸ್ ಸಭೆ

ಬೀದರ ಜೂನ್ 21 (ಕ.ವಾ.): ಸಂಸದರಾದ ಭಗವಂತ ಖೂಬಾ ಅವರ ಅಧ್ಯಕ್ಷತೆಯಲ್ಲಿ ಕುಂಬಾರವಾಡದ ಲೀಡ್ ಬ್ಯಾಂಕ್ ಕಚೇರಿಯ ಸಭಾಂಗಣದಲ್ಲಿ ಜೂನ್ 21ರಂದು ಬ್ಲಾಕ್ ಮಟ್ಟದ ಬ್ಯಾಂಕರ್ಸ್ ಸಭೆ ನಡೆಯಿತು.
ಸಭೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪೂರ್ವ ಸಿದ್ದತೆಯ ಕುರಿತು ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಸಂಸದರು, ಜಿಲ್ಲೆಯಲ್ಲಿರುವ ಎಲ್ಲಾ ರೈತರು ಈ ಯೋಜನೆಯ ವ್ಯಾಪ್ತಿಗೆ ಬರುವ ಹಾಗೆ ನೋಂದಣಿ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿದರು.
2021-22ನೇ ಸಾಲಿನಲ್ಲಿ ಕೂಡ ಈ ಯೋಜನೆಗೆ ರೈತರು ನೋಂದಣಿ ಮಾಡಿಸುವುದರಿಂದ ಹಿಡಿದು, ಅವರಿಗೆ ಬೆಳೆ ಪರಿಹಾರ ಒದಗಿಸುವವರೆಗೆ ಸತತವಾಗಿ ಕೆಲಸ ಮಾಡಬೇಕು ಎಂದು ಸಂಸದರು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ತಾರಾಮಣಿ ಜಿ.ಎಚ್. ಅವರಿಗೆ ಸೂಚಿಸಿದರು.
ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಯು ಪ್ರೈವೇಟ್ ರೇಸಿಡೆಂಟ್‌ಗಳನ್ನು ಬಳಸಿಕೊಳ್ಳಬೇಕು. ರೈತರಲ್ಲಿ ಬ್ಯಾಂಕಗಳ ಬಗ್ಗೆ ವಿಶ್ವಾಸ ಮೂಡುವಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿಯು ಉತ್ತಮವಾದ ಸೇವೆಯನ್ನು ನೀಡಬೇಕು. ಫಸಲ್ ಬಿಮಾ ಯೋಜನೆ ಕುರಿತು ಬ್ಯಾಂಕರ್ಸ್, ಕೃಷಿ ಇಲಾಖೆಯವರು ಹಾಗೂ ವಿಮಾ ಕಂಪನಿಯವರು ಅತಿಹೆಚ್ಚು ಪ್ರಚಾರ ಮಾಡಬೇಕು. ಈ ಬಗ್ಗೆ ಕೈಗೊಂಡ ವರದಿಯನ್ನು 3 ದಿನದೊಳಗೆ ತಮಗೆ ಸಲ್ಲಿಸಬೇಕು ಎಂದು ಸಂಸದರು ಸೂಚಿಸಿದರು.
ಪಿ.ಎಮ್.ಕಿಸಾನ್ ಯೋಜನೆಯಡಿಯಲ್ಲಿ 8ನೇ ಕಂತಿನಲ್ಲಿ ಒಟ್ಟು 1,78,544 ರೈತರಿಗೆ 35.7 ಕೋಟಿ ರೂ. ಹಣ ಜಮೆಯಾಗಿದೆ. ಇನ್ನು ಕೆಲವು ರೈತರಿಗೆ ಖಾತೆ ಸಮಸ್ಯೆ, ಅಧಾರ್ ಸಮಸ್ಯೆಯಿಂದ ಹಣ ಜಮೆಯಾಗಿರುವುದಿಲ್ಲ. ಈ ತೊಂದರೆಯನ್ನು ವಾರದೊಳಗೆ ಸರಿಪಡಿಸಿ, ವರದಿಯನ್ನು ವಾರದೊಳಗೆ ತಮಗೆ ಸಲ್ಲಿಸಬೇಕು ಎಂದು ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಂಕಿನ ಮ್ಯಾನೇಜರ್, ಜಂಟಿ ಕೃಷಿ ನಿರ್ದೇಶಕರು ಮತ್ತು ವಿವಿಧ ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Latest Indian news

Popular Stories