ಸಿಎಂ ಬಿಎಸ್‌ವೈಗೆ ಮತ್ತೆ ಡೀನೋಟಿಫಿಕೇಶನ್ ಸಂಕಟ

ಬೆ0ಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಡೀನೋಟಿಫಿಕೇಶನ್ ಭೂತ ಮುತ್ತಿಕೊಂಡಿದೆ. ಬೆಳ್ಳಂದೂರು ಡೀನೋಟಿಫಿಕೇಶನ್ ಪ್ರಕರಣದ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿದೆ. ವಾಸುದೇವ ರೆಡ್ಡಿ ಎಂಬುವರು ಸಲ್ಲಿಸಿದ ದೂರನ್ನು ಪರಿಗಣಿಸಿ ವಿಶೇಷ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ. ಲೋಕಾಯುಕ್ತ ಪೊಲೀಸರು ಈ ಹಿಂದೆ ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದರಿಂದ ಯಡಿಯೂರಪ್ಪ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ, ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಿರುವುದು ಸಿಎಂಗೆ ಮತ್ತೆ ಸಂಕಷ್ಟ ಎದುರಾಗುವಂತಾಗಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ತಿರಸ್ಕರಿಸಿದ ನ್ಯಾಯಾಲಯ, ಯಾವುದೇ ವಿಳಂಬ ಇಲ್ಲದೇ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ಪಿಗೆ ಸೂಚಿಸಿದೆ.
ಏನಿದು ಪ್ರಕರಣ ?: ೨೦೦೦-೦೧ರಲ್ಲಿ ಐಟಿ ಪಾರ್ಕ್ಗಾಗಿ ಕೆಐಎಡಿಬಿ ಬೆಳ್ಳಂದೂರು, ದೇವರ ಬೀಸನಹಳ್ಳಿಯಲ್ಲಿ ಭೂಸ್ವಾಧೀನ ಮಾಡಿತ್ತು. ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದಾಗ ೪.೩೦ ಎಕರೆಯಷ್ಟು ಜಾಗವನ್ನು ಡೀನೋಟಿಫೈ ಮಾಡಿದ್ದರು. ೨೦೧೩ರಲ್ಲಿ ವಾಸುದೇವ ರೆಡ್ಡಿ ಅವರು ಲೋಕಾಯುಕ್ತದಲ್ಲಿ ಖಾಸಗಿ ದೂರು ನೀಡಿದ್ದರು. ಆದರೆ, ೨೦೨೧, ಜನವರಿಯಲ್ಲಿ ಲೋಕಾಯುಕ್ತ ಪೊಲೀಸರು ವಾಸುದೇವ ರೆಡ್ಡಿ ಸಲ್ಲಿಸಿದ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಇದೀಗ ಈ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ಸ್ಪೆಷಲ್ ಕೋರ್ಟ್ ತಿರಸ್ಕರಿಸಿ ತನಿಖೆಗೆ ಆದೇಶಿಸಿದೆ.

Latest Indian news

Popular Stories