ಪರಸ್ಪರರನ್ನು ಅರಿಯುವ ಮೂಲಕ ನಮ್ಮ ನಡುವಿನ ಅಂತರವನ್ನು ಕಡಿಮೆಗೊಳಿಸಲು ಸಾಧ್ಯ:ಮುಹಮ್ಮದ್ ಕುಂಞಿ

ಮಂಗಳೂರು : ಪ್ರವಾದಿಗಳು, ಮಹಾಪುರುಷರ ಸಂದೇಶಗಳು ಸಾರ್ವತ್ರಿಕವಾಗಿದ್ದು, ಅವರನ್ನು ಅರಿಯುವ ಮತ್ತು ಪರಸ್ಪರ ತಿಳಿಸುವ ಮೂಲಕ ನಾವು ಸಮಾಜದಲ್ಲಿ ಹೆಚ್ಚುತ್ತಿರುವ ಅಂತರವನ್ನು ಕಡಿಮೆಗೊಳಿಸಬೇಕು.ಪ್ರವಾದಿ ಮುಹಮ್ಮದ್ ರವರು ಅತ್ಯಂತ ಸರಳವಾಗಿ ಬದುಕಿ ಅತ್ಯಂತ ಆನಂದಮಯ ನೆಮ್ಮದಿದಾಯಕ ಜೀವನ ಹೇಗೆ ಸಾಧಿಸಬಹುದು ಎಂದು ಕಲಿಸಿಕೊಟ್ಟರು ಎಂದು ಜಮಾಅತೇ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಹೇಳಿದರು.

ಅವರು ನಗರದ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವತಿಯಿಂದ ಆಯೋಜಿಸಲಾಗಿದ್ದ “ಪ್ರವಾದಿ ಮುಹಮ್ಮದ್(ಸ) ಅತ್ಯುತ್ತಮ ಮಾದರಿ” ಎಂಬ ಅಭಿಯಾನದ ಪ್ರಯುಕ್ತ ಸೌಹಾರ್ದ ಸಮ್ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರವಾದಿ ಮುಹಮ್ಮದ್(ಸ) ಮಾನವ ಕುಲಕ್ಕೆ ದೇವನ ಪರಿಚಯ, ಮಾನವೀಯ ಮೌಲ್ಯಗಳನ್ನು ಕಲಿಸಲು ಬಂದವರು. ಮನುಷ್ಯನ ಬದುಕಿನ ವಾಸ್ತವಿಕತೆಯ ಬಗ್ಗೆ ಚಿಂತಿಸಲು ಕರೆ ಕೊಟ್ಟಿದ್ದಾರೆ. ನಮ್ಮ ಮಕ್ಕಳು ನಮ್ಮಂತೆ ಆಗಬೇಕಾದರೆ ನಾವು ಅವರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರವರು, ಇಂತಹ ಸೌಹಾರ್ದ ಕಾರ್ಯಕ್ರಮವನ್ನು ನಾವೂ ಹಮ್ಮಿಕೊಂಡು ನಮ್ಮ ಚಿಂತನೆಯನ್ನು ಇತರರಿಗೂ ತಿಳಿಸುವ ಕೆಲಸ ಹೆಚ್ಚು ನಡೆಯಬೇಕು. ಆಗ ಸೌಹಾರ್ದ ಭಾರತ ನಿರ್ಮಾಣ ಆಗಬಹುದು ಎಂದರು.

ಬದ್ರಿಯಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎನ್. ಇಸ್ಮಾಯಿಲ್ ಮಾತನಾಡುತ್ತಾ, ಧರ್ಮ, ವಿಚಾರಗಳು ಮತ್ತು ತತ್ವಗಳು ಇರುವಂತೆಯೇ ನಾವೆಲ್ಲರೂ ಮನುಷ್ಯ ಎಂಬ ನೆಲೆಯಲ್ಲಿ ಬಾಳಬೇಕು. ನಮಗೆ ನಮ್ಮದೇ ಆದ ಭಿನ್ನ ಭಿನ್ನ ವಿಚಾರಗಳು ಇರಬಹುದು, ಆದರೆ ಅದು ನಮ್ಮನ್ನು ಪ್ರತ್ಯೇಕಿಸುವ ಸಾಧನ ಆಗಬಾರದು. ಬದಲಾಗಿ ನಮ್ಮನ್ನು ಇನ್ನಷ್ಟು ಅರಿಯಲು ಹೇತುವಾಗಬೇಕು. ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳಿಂದ ಅದು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಭಿಕರಲ್ಲಿ ಕೆಲವರು ಸಂದರ್ಭೋಚಿತವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ.ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಉಪಸ್ಥಿತರಿದ್ದರು. ನಿಹಾಲ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Latest Indian news

Popular Stories

error: Content is protected !!