ಬಿಜೆಪಿ ನುಡಿದಂತೆ ನಡೆಯಲ್ಲ ಎಂದ ದಿಗ್ವಿಜಯಸಿಂಗ್

ನವದೆಹಲಿ: ಬಿಜೆಪಿಯವರು ಮಾತು ಮತ್ತು ಕೃತಿ ಭಿನ್ನವಾಗಿರುತ್ತವೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯಸಿಂಗ್ ಟೀಕಿಸಿದ್ದಾರೆ.
ಎಲ್ಲ ಭಾರತೀಯರ ಡಿಎನ್‌ಎ ಒಂದೇ ಎಂಬ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಹೇಳಿದ ಮಾತಿನ ಹಾಗೆಯೇ ಭಾಗವತ್ ಬದ್ದರಾಗಿರಬೇಕು, ಅಮಾಯಕ ಮುಸ್ಲಿಮರಿಗೆ ಕಿರುಕುಳ ನೀಡಿದ ಬಿಜೆಪಿ ನಾಯಕರನ್ನು ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಸವಾಲು ಹಾಕಿದ್ದಾರೆ.
ಬಿಜೆಪಿಯವರು ಆಡುವ ಮಾತೇ ಬೇರೆ, ನಡೆದು ಕೊಳ್ಳುವ ರೀತಿಯೇ ಬೇರೆ ಎಂದು ಆರೋಪಿಸಿದ್ದಾರೆ. ಭಾನುವಾರ ನಡೆದ ಆರ್ ಎಸ್ ಎಸ್ ಮಂಚ್ ನಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಗೋವು ಪವಿತ್ರವಾದ ಪ್ರಾಣಿ. ಆದರೆ ಬೇರೆಯವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿರುವವರು ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ. ಅಂತಹವರ ವಿರುದ್ಧ ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದರು.
ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಖೆಡ್ಡಕ್ಕೆ ಯಾರೂ ಬೀಳಬಾರದು. ಹಿಂದೂ-ಮುಸ್ಲಿA ಏಕತೆಯ ಹೆಸರಲ್ಲಿ ಮೊದಲು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಆಗಿದ್ದರು ಎಂಬ ದಾರಿತಪ್ಪಿಸುವ ಹೇಳಿಕೆಗಳಿಗೆ ಕಿವಿಕೊಡಬಾರದು. ಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್‌ಎ ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಭಾಗವತ್ ಪ್ರತಿಪಾದಿಸಿದ್ದರು.
ಮುಸ್ಲಿಮರು ಭಾರತ ಬಿಟ್ಟು ಹೋಗಬೇಕು ಎಂದು ಹೇಳುವ ವ್ಯಕ್ತಿ ಹಿಂದುವೇ ಅಲ್ಲ ಎಂದೂ ಮೋಹನ್ ಭಾಗವತ್ ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹಿಂದೂ ಅಥವಾ ಮುಸ್ಲಿಮರ ಪ್ರಾಬಲ್ಯವನ್ನು ಹೊಂದಲು ಸಾಧ್ಯವಿಲ್ಲ, ಇಲ್ಲಿ ಎಲ್ಲರೂ ಸಮಾನರು ಎಂದು ಭಗವತ್ ಹೇಳಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಎರಡು ವಿಭಿನ್ನ ಗುಂಪುಗಳಲ್ಲ, ಅವರನ್ನು ಒಗ್ಗೂಡಿಸುವ ಅಗತ್ಯವೂ ಇಲ್ಲ, ಏಕೆಂದರೆ ಅವರು ಈಗಾಗಲೇ ಒಟ್ಟಿಗೆ ಇದ್ದು, ಸುಮಾರು 40 ಸಾವಿರ ವರ್ಷಗಳಿಂದ ನಾವೆಲ್ಲ ಒಂದೇ ಪೂರ್ವಜರ ವಂಶಸ್ಥರು ಎಂದು ಹೇಳಿದ್ದಾರೆ.
`ಹಸು ಒಂದು ಪವಿತ್ರ ಪ್ರಾಣಿ, ಆದರೆ ಅದರ ಹೆಸರಿನಲ್ಲಿ ಹಲ್ಲೆ ಮಾಡುವವರು ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ. ಅಂತಹ ಜನರ ವಿರುದ್ಧ ಯಾವುದೇ ತಾರತಮ್ಯವಿಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಭಾಗವತ್ ಆಗ್ರಹಿಸಿದ್ದಾರೆ.
ಭಾಗವತ್ ಮಾತನ್ನು ಮುಂದುವರೆಸಿ, ರಾಜಕೀಯಕ್ಕೆ ಕೆಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ಪ್ರಮುಖವಾಗಿ, ರಾಜಕೀಯಕ್ಕೆ ಜನರನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಆದರೆ ರಾಜಕೀಯ ಏಕತೆಯನ್ನು ವಿರೂಪಗೊಳಿಸುವ ಅಸ್ತ್ರವಾಗಬಹುದು ಎಂದಿದ್ದಾರೆ.
ಭಾರತದಲ್ಲಿ ಮುಸ್ಲಿಮರು ಅಪಾಯದಲ್ಲಿ ಇದ್ದಾರೆ ಎಂಬ ವಾದವನ್ನು ಒಪ್ಪಲು ಸಿದ್ಧವಿಲ್ಲ ಎಂದ ಅವರು, ದೇಶ ಯಾವುದೇ ಒಂದು ಸಮುದಾಯವನ್ನು ಬಿಟ್ಟು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಅಭಿವೃದ್ಧಿ ಸಾಧಿಸಲು ಕುಳಿತು ಸಂವಾದ ನಡೆಸಬೇಕೇ ಹೊರತು, ಎಲ್ಲದಕ್ಕೂ ಅಪಸ್ವರ ಎತ್ತುವುದಲ್ಲ ಎಂದಿದ್ದಾರೆ.
ಘಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್ ಭಾಗವತ್ ಹಿಂದೂ-ಮುಸ್ಲಿA ಐಕ್ಯತೆಯ ಬಗ್ಗೆ ಈ ಎಲ್ಲ ವಿಷಯಗಳನ್ನು ಹೇಳಿದ್ದಾರೆ ಎಂದು ದಿ ಕ್ವಿಂಟ್ ಹಿಂದಿ ವರದಿ ಮಾಡಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಮುಸ್ಲಿಂ ಮಂಚ್ ಆಯೋಜಿಸಿದ್ದು ಡಾ. ಖ್ವಾಜಾ ಇಫ್ತಿಖರ್ ಅಹ್ಮದ್ ಬರೆದ ಪುಸ್ತಕವನ್ನು ಇಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವತ್ ಅವರಲ್ಲದೆ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Latest Indian news

Popular Stories

error: Content is protected !!