ಬಿಜೆಪಿ ನಾಯಕರ ವಿರುದ್ಧ ರೈತರ ಪ್ರತಿಭಟನೆ

ಚಂಡೀಗಢ: ಹರಿಯಾಣದ ಎರಡು ಜಿಲ್ಲೆಗಳಲ್ಲಿ ರೈತರು ಇಂದು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದರು. ಸುಮಾರು ಆರು ತಿಂಗಳಿಗೂ ಅಧಿಕ ಕಾಲದಿಂದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರು ಈಗ ಬಿಜೆಪಿ ನಾಯಕರು ಯಾವುದೇ ಕಾರ್ಯಕ್ರಮಕ್ಕೆ ಬರುವುದನ್ನು ತಡೆಯುತ್ತಿದ್ದಾರೆ.
ಹರಿಯಾಣದ ಯಮುನಾನಗರ ಮತ್ತು ಹಿಸಾರ್ ಜಿಲ್ಲೆಗಳಿಂದ ಈ ಘಟನೆ ವರದಿಯಾಗಿದೆ. ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರವು ದೆಹಲಿಗೆ ರಸ್ತೆಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಟೆಲಿಕಾಂ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕ ಅಥವಾ ನಿಧಾನಗೊಳಿಸುವ ಮೂಲಕ ರೈತರ ಪ್ರತಿಭಟನೆಯನ್ನು ತಡೆಯಲು ಹಲವು ತಿಂಗಳುಗಳಿAದ ಪ್ರಯತ್ನಿಸುತ್ತಿದೆ.
ರಾಜ್ಯ ಸಾರಿಗೆ ಸಚಿವ ಮೂಲ್ಚಂದ್ ಶರ್ಮಾ ಇಂದು ಯಮುನಾನಗರದಲ್ಲಿ ನಡೆದ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಬೇಕಿತ್ತು. ಆದರೆ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇದಕ್ಕೂ ಮುನ್ನವೇ ರೈತರು ಜಿಲ್ಲೆಯ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಬಿಜೆಪಿ-ಜೆಜೆಪಿ ಮುಖಂಡರಿಗೆ ಅವಕಾಶ ನೀಡಬಾರದು ಎಂದು ಕರೆ ನೀಡಿದ್ದರು.
ರೈತರು ಈ ಕರೆ ನೀಡಿದ್ದ ಹಿನ್ನೆಲೆ ಪೊಲೀಸ್ ಸಿಬ್ಬಂದಿಗಳನ್ನು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಹಾಗೆಯೇ ಹಲವಾರು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಆದರೆ ರೈತರು ಟ್ರಾಕ್ಟರುಗಳಲ್ಲಿ ಬಂದು ಬ್ಯಾರಿಕೇಡ್‌ಗಳನ್ನು ಕಿತ್ತುಹಾಕಿದ್ದಾರೆ.
ಹಿಸಾರ್‌ನ ಗುರು ಜಂಬೇಶ್ವರ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಮಾತನಾಡಬೇಕಿತ್ತು. ಆದರೆ, ಅಲ್ಲೂ ಇದೇ ರೀತಿಯ ಘಟನೆ ನಡೆದಿದೆ.
ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು. ಈ ಪಡೆಗೆ ಉಪ ಪೊಲೀಸ್ ಆಯುಕ್ತರಾದ ರೋಹ್ತಾಸ್ ಸಿಹಾಗ್ ಮತ್ತು ರಾಜ್ಬೀರ್ ಸೈನಿ ನೇತೃತ್ವ ವಹಿಸಿದ್ದರು.
ರೈತರು ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಪ್ರತಿಭಟನಾಕಾರರ ವಿರೋಧದಿಂದಾಗಿ ಬಿಜೆಪಿಯ ಕಾರ್ಯಕ್ರಮ ರದ್ದಾಗಿದೆ ಎಂದು ವಿಶ್ವವಿದ್ಯಾಲಯ ಆಡಳಿತ ಘೋಷಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಹಲವಾರು ಬಾರಿ ರೈತರು ಬಿಜೆಪಿ-ಜೆಜೆಪಿ ನಾಯಕರ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದರೂ ಈ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರೈತರು ಇಂದು ಕಪ್ಪು ಧ್ವಜ ಹಿಡಿದು ಪ್ರತಿಭಟನೆ ಮಾಡುವುದಾಗಿ ಹೇಳಿದ್ದರು.

Latest Indian news

Popular Stories

error: Content is protected !!