ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಗೆಹ್ಲೋಟ್

ಬೆಂಗಳೂರು: ರಾಜ್ಯದ 19ನೇ ರಾಜ್ಯಪಾಲರಾಗಿ ಕೇಂದ್ರದ ಮಾಜಿ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರಿಗೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಕೋವಿಡ್ ಮಾರ್ಗಸೂಚಿಯಂತೆ ರಾಜಭವನದ ಗಾಜಿನಮನೆಯಲ್ಲಿ ಸರಳವಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ವಜುಭಾಯಿವಾಲಾ ಅವರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಥಾವರಚಂದ್ ಗೆಹ್ಲೋಟ್ ಅವರನ್ನು ರಾಷ್ಟ್ರಪತಿ ಭವನ ಕರ್ನಾಟಕದ ನೂತನ ರಾಜ್ಯಪಾಲರಾಗಿ ಆಯ್ಕೆ ಮಾಡಿತು. ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಗೆಹ್ಲೋಟ್ ಅವರು ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ.
ಸAಘಪರಿವಾರ ಹಾಗೂ ಅರ್‌ಎಸ್‌ಎಸ್‌ನ ನಿಷ್ಠಾವಂತರಾಗಿ ನಂಬಿದ ಸಿದ್ದಾಂತಕ್ಕೆ ಬದ್ದರಾಗಿದ್ದರಿಂದಲೇ ನಿರೀಕ್ಷೆಯನ್ನೇ ಮಾಡದ ಉನ್ನತವಾದ ರಾಜ್ಯಪಾಲರ ಹುದ್ದೆ ಅವರಿಗೆ ಒಲಿದು ಬಂದಿದೆ. ಗೆಹ್ಲೋಟ್ ಅವರು ಮೇ 18, 1948 ರಂದು ಮಧ್ಯಪ್ರದೇಶದ ಉಜ್ಜಯಿನಿಯ ರೂಪೇಟದಲ್ಲಿ ಜನಿಸಿದರು. ಅವರು ಉಜ್ಜಯಿನಿಯ ವಿಕ್ರಮ್ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದಿದ್ದರು.
ಗೆಹ್ಲೋಟ್ 1962ರಲ್ಲಿ ಜನ ಸಂಘದ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಬಿಜೆಪಿಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ಸೇರಿದಂತೆ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ 2006 ಮತ್ತು 2014ರಲ್ಲಿ ರಾಜ್ಯ ಉಸ್ತುವಾರಿ ವಹಿಸಿದ್ದರಿಂದ ಅವರಿಗೆ ಕರ್ನಾಟಕದ ಪರಿಚಯವಿದೆ.
ಮಧ್ಯಪ್ರದೇಶದಲ್ಲಿ ಮೂರು ಅವಧಿಯ ಶಾಸಕರಾಗಿದ್ದ ಗೆಹ್ಲೋಟ್ 1996 ರಿಂದ 2009 ರವರೆಗೆ ಶಾಜಪುರದಿಂದ ಲೋಕಸಭಾ ಸದಸ್ಯರಾಗಿ ನಾಲ್ಕು ಅವಧಿಗೆ ಸೇವೆ ಸಲ್ಲಿಸಿದ್ದಾರೆ. 2009ರ ಲೋಕಸಭಾ ಚುನಾವಣೆಯಲ್ಲಿ ಸೋತ ಅವರು 2012ರಲ್ಲಿ ರಾಜ್ಯಸಭೆಗೆ ಕಳುಹಿಸಲ್ಪಟ್ಟರು. ಅಂತೆಯೇ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದ ಗೆಹ್ಲೋಟ್ ಅವರು ಇತ್ತೀಚೆಗಷ್ಟೇ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ನಿರ್ಗಮಿತ ರಾಜ್ಯಪಾಲಯ ವಜುಭಾಯಿ ವಾಲಾ, ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದೆ ಸುಮಲತಾ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸೇರಿದಂತೆ ಮತ್ತಿತರರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.

Latest Indian news

Popular Stories