ಪತ್ರಕರ್ತ ಕಿಶೋರ್‌ಚಂದ್ರ ಬಿಡುಗಡೆಗೆ ಹೈಕೋರ್ಟ್ ಆದೇಶ

ಇಂಫಾಲ್ : `ಸಗಣಿ, ಗೋಮೂತ್ರ ಕೆಲಸ ಮಾಡಲಿಲ್ಲ’ ಎಂದು ಬಿಜೆಪಿ ನಾಯಕರೊಬ್ಬರು ಕೋವಿಡ್ ನಿಂದ ಮೃತಪಟ್ಟ ನಂತರ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ಬಂಧಿಸಲ್ಪಟ್ಟಿದ್ದ ಮಣಿಪುರದ ಪತ್ರಕರ್ತ ಕಿಶೋರ್‌ಚಂದ್ರ ವಾಂಘೆಮ್ಚ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಮಣಿಪುರ ಹೈಕೋರ್ಟ್ ಇಂದು ಆದೇಶಿಸಿದೆ.
ಇಂತಹುದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಗೂ ನಂತರ ಕೋರ್ಟ್ ಬಿಡುಗಡೆಗೊಳಿಸುವಂತೆ ಆದೇಶಿಸಿದ್ದ ಮಣಿಪುರದ ಸಾಮಾಜಿಕ ಹೋರಾಟಗಾರ ಎರೆಂಡ್ರೊ ಲೀಚೊಂಬವ ಪ್ರಕರಣದಂತೆಯೇ ಇವರ ಬಂಧನ ಕೂಡ ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಕಿಶೋರಚಂದ್ರ ಅವರ ಪತ್ನಿ ರಂಜಿತಾ ಅವರು ಪತ್ರಮುಖೇನ ಸಲ್ಲಿಸಿದ್ದ ಅಪೀಲಿನ ಕುರಿತಂತೆ ಇಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ನೋಬಿನ್ ಸಿಂಗ್ ಅವರ ಪೀಠ ತುರ್ತು ವಿಚಾರಣೆ ನಡೆಸಿ ಕಿಶೋರಚಂದ್ರ ಅವರನ್ನು ಇಂದು ಸಂಜೆ 5 ಗಂಟೆಯೊಳಗೆ ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿದೆ.
ಕಿಶೋರಚಂದ್ರ ಹಾಗೂ ಎರೆಂಡ್ರೋ ಅವರಿಬ್ಬರನ್ನೂ ಒಂದೇ ಪ್ರಕರಣದಲ್ಲಿ ಬಂಧಿಸಲಾಗಿದ್ದರೂ ಎರೆಂಡ್ರೋ ಅವರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಕಿಶೋರಚಂದ್ರ ಇನ್ನೂ ಜೈಲಿನಲ್ಲಿಯೇ ಉಳಿದಿದ್ದಾರೆ ಎಂದು ಅವರ ಪತ್ನಿ ನ್ಯಾಯಾಧೀಶರುಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.

Latest Indian news

Popular Stories