ಸದಾನಂದಗೌಡರಿಗೆ ಸಿಗಲಿದೆಯೇ ಮಹತ್ವದ ಹುದ್ದೆ ?

ಬೆಂಗಳೂರು: ಕೇಂದ್ರದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ಸಂಸದ ಡಿ.ವಿ.ಸದಾನಂದಾಗೌಡ ಅವರಿಗೆ ರಾಜ್ಯದಲ್ಲಿ ಮಹತ್ವದ ಹುದ್ದೆ ಸಿಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಸದಾನಂದಗೌಡರಿAದ ಸಚಿವ ಸ್ಥಾನ ಕೈತಪ್ಪುತ್ತಿದ್ದಂತೆ ರಾಜ್ಯದಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ. ರಾಜ್ಯ ರಾಜಕಾರಣದತ್ತ ಆಸಕ್ತಿ ವಹಿಸಿ ಎಂದು ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆದಲ್ಲಿ ಆಗ ಮತ್ತೆ ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ ಎಂಬ ಗುಸು ಗುಸು ಆರಂಭವಾಗಿದೆ. ಇದರ ಜೊತೆಗೆ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸೂಚನೆ ಸಿಕ್ಕಿದೆ ಎನ್ನಲಾಗುತ್ತಿದೆ.

ಸದಾನಂದಗೌಡ ಅವರನ್ನು ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂದರೆ, ಅವರು ರಾಜ್ಯ ರಾಜಕಾರಣಕ್ಕೆ ವಾಪಸ್ ಆಗುವರೇ? ಅಥವಾ ರಾಷ್ಟ್ರೀಯ ರಾಜಕಾರಣದಲ್ಲಿರುವರೇ ಎಂಬ ಕುತೂಹಲವೂ ಹುಟ್ಟುಕೊಂಡಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾರ್ಯಕ್ಷಮತೆ ಬಗ್ಗೆ ಪಕ್ಷದಲ್ಲಿ ಭಾರೀ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಸದಾನಂದಗೌಡ ಅವರಿಗೆ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷಗಾದಿ ಒಲಿಯುವುದೇ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನ ಬದಲಿಸಿದರೆ ಆಗುವ ಸಂಚಲನವನ್ನು ಸಂಭಾಳಿಸಲು ಡಿವಿಎಸ್ ಅವರಿಗೆ ಅವಕಾಶ ನೀಡಲಾಗುವುದೇ ಎಂಬ ಚರ್ಚೆಯೂ ನಡೆಯುತ್ತಿದೆ.

ಸದಾನಂದಗೌಡ ಅವರು ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 2008ರಲ್ಲಿ ಸದಾನಂದಗೌಡ ಅಧ್ಯಕ್ಷರಾಗಿದ್ದಾಗಲೇ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೇ ಅನುಭವದ ಹಿನ್ನೆಲೆಯಲ್ಲಿ ಸದಾನಂದಗೌಡರಿಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ನೀಡಬಹುದು ಎಂದು ಹೇಳಲಾಗುತ್ತಿದೆ.

ಸದಾನಂದಗೌಡ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಆಗುತ್ತಿರಲು ರಾಜೀನಾಮೆ ಪಡೆಯುವಾಗ ಪಕ್ಷದ ವರಿಷ್ಠರು ನೀಡಿರುವ ಭರವಸೆ ಮಾತುಗಳೇ ಕಾರಣ ಎನ್ನಲಾಗುತ್ತಿದ್ದು ಡಿ.ವಿ. ಸದಾನಂದಗೌಡ ಅವರ ರಾಜಕೀಯ ಪಯಣ ನಿರ್ಣಾಯಕ ಘಟ್ಟ ತಲುಪಿದೆ.

ಈ ನಡುವೆ ತಮ್ಮ ವಿರುದ್ಧದ ಸಿಡಿಯೊಂದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದೇ ಸದಾನಂದಗೌಡ ಅವರಿಗೆ ಮುಳುವಾಯಿತು. ಮುಂದೆ ಸಿಡಿ ಹೊರಗಡೆ ಬಂದರೆ ಇರುಸು ಮುರುಸು ಉಂಟಾಗುತ್ತದೆ. ಅವರ ವೈಯಕ್ತಿಕ ಸಮಸ್ಯೆಯಿಂದ ಪಕ್ಷ ಮುಜುಗರಕ್ಕೆ ಸಿಲುಕಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಅವರಿಂದ ಕೇಂದ್ರದ ನಾಯಕರು ರಾಜೀನಾಮೆ ಪಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

Latest Indian news

Popular Stories