ಮಡಿಕೇರಿ: ಹೋಮ್’ಸ್ಟೆ ಬಾತ್’ರೂಮ್’ನಲ್ಲಿ ಗ್ಯಾಸ್ ಗೀಸರ್ ಅನಿಲ ಸೋರಿಕೆ – ಯುವತಿ ಮೃತ್ಯು

ಮಡಿಕೇರಿ: ನೋಂದಣಿಯಾಗದ ಹೋಮ್ ಸ್ಟೇ ನಲ್ಲಿ ತಂಗಿದ್ದ ಪ್ರವಾಸಕ್ಕಾಗಿ ಬಂದಿದ್ದ ಯುವತಿಯೋರ್ವಳು ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ಮೃತಪಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ವಿಘ್ನೇಶ್ವರಿ (24) ಮುಂಬೈ ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಅ.22 ರಂದು ಆಕೆ ತನ್ನ ಇತರ ನಾಲ್ವರು ಸಹಚರರೊಂದಿಗೆ ಹಂಪಿ ಎಕ್ಸ್ ಪ್ರೆಸ್ ರೈಲಿನ ಮೂಲಕ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಈ ಬಳಿಕ ಆಕೆ ಕೊಡಗಿಗೂ ಭೇಟಿ ನೀಡಿದ್ದು, ಭಾನುವಾರದಂದು ತಲಕಾವೇರಿಗೂ ತೆರಳಿದ್ದರು.

5 ಯುವತಿಯರ ತಂಡ ಮಡಿಕೇರಿಯ ಡೈರಿ ಫಾರ್ಮ್ ಪ್ರದೇಶದಲ್ಲಿ ಹೋಂ ಸ್ಟೇ ಯನ್ನು ಕಾಯ್ದಿರಿಸಿದ್ದರು. ಭಾನುವಾರ ರಾತ್ರಿ 8:30 ಕ್ಕೆ ಬಾತ್ ರೂಮ್ ಗೆ ತೆರಳಿದ ವಿಘ್ನೇಶ್ವರಿ ಎಷ್ಟು ಸಮಯವಾದರೂ ವಾಪಸ್ಸಾಗಲಿಲ್ಲ. ಇದರಿಂದ ಅನುಮಾನಗೊಂಡ ಇತರ ಯುವತಿಯರು ಬೀಗ ಮುರಿದು ಬಾತ್ ರೂಮ್ ಒಳಗೆ ಪ್ರವೇಶಿಸಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದರು.

ಮೂಲಗಳ ಪ್ರಕಾರ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿದ್ದೇ ವಿಘ್ನೇಶ್ವರಿ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಗ್ಯಾಸ್ ಗೀಸರ್ ಅಳವಡಿಸಲಾಗಿದ್ದ ಆ ಪ್ರದೇಶದಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

ವಿಘ್ನೇಶ್ವರಿ ಕೂರ್ಗ್ ವ್ಯಾಲಿ ವ್ಯೂ ಹೋಮ್ ಸ್ಟೇ ನಲ್ಲಿ ತಂಗಿದ್ದರು. ಹೋಮ್ ಸ್ಟೇ ನ ಮಾಲಿಕ ದುಬೈ ನಿವಾಸಿಯಾಗಿದ್ದು, ಈ ಹೋಮ್ ಸ್ಟೇ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರಲಿಲ್ಲ. ಹೋಮ್ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿಜಿ ಅನಂತಶ್ಯಾನ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಅಕ್ರಮ ಹೋಮ್ ಸ್ಟೇ ಗಳು ನಡೆಯುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಕ್ರಮ ಹೋಮ್ ಸ್ಟೇ ಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.

Latest Indian news

Popular Stories