ಮಧ್ಯಮ ವರ್ಗಕ್ಕೆ ಮೋದಿ ಮಾರಕ: ಖರ್ಗೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ನೀತಿಗಳು ಭಾರತದ ಮಧ್ಯಮ ಮತ್ತು ಕಡಿಮೆ ಆದಾಯದ ಗುಂಪುಗಳನ್ನು ನಾಶ ಪಡಿಸುತ್ತಿವೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕಳೆದ ಒಂದುವರೆ ವರ್ಷದಲ್ಲಿ ಗುಜರಾತಿನ ಜನ 10 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಅಡಮಾನ ಮಾಡಿದ್ದಾರೆ. ದಿನನಿತ್ಯ ಖರ್ಚುಗಳನ್ನು ಪೂರೈಸಲು, ಸಿಬ್ಬಂದಿಗಳಿಗೆ ವೇತನ ಪಾವತಿಸಲು, ವೈದ್ಯಕೀಯ ವೆಚ್ಚವನ್ನು ಪಾವತಿಸಲು, ಮದುವೆ ಖರ್ಚುಗಳಿಗೆ ಚಿನ್ನವನ್ನು ಅಡಮಾನ ಮಾಡಲಾಗಿದೆ ಎಂದು ವರದಿಯಾಗಿದೆ. ಗುಜರಾತ್ ಪತ್ರಿಕೆಯಲ್ಲಿ ವರದಿಯಾದ ಲೇಖನವನ್ನು ಪ್ರಸ್ತಾಪಿಸಿರುವ ಖರ್ಗೆ ಅವರು, ಮೋದಿ ಅವರ ಸರ್ಕಾರ ಮಧ್ಯಮ ವರ್ಗ ಹಾಗೂ ಸಣ್ಣ ಆದಾಯದ ಕುಟುಂಬಗಳನ್ನು ನಾಶ ಪಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ದೇಶದಲ್ಲಿರುವ ಶ್ರೀಮಂತ ಸಹಕಾರಿ ವಲಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ರಚಿಸಿದೆ ಎಂದೂ ಖರ್ಗೆಯವರು ಆರೋಪಿಸಿದ್ದಾರೆ.
ಮುಂಬಯಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಹಣಕಾಸು ಸಂಬAಧಿತ ಸಮಸ್ಯೆಗಳನ್ನು ಹಣಕಾಸು ಸಚಿವರು ನಿರ್ವಹಿಸುತ್ತಿದ್ದರು, ಆದರೆ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಜಾರಿ ನಿರ್ದೇಶನಾಲಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಖರ್ಗೆ ಟೀಕಿಸಿದರು.
ಅಮಿತ್ ಶಾ ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಮತ್ತು ಅವರ ಸದ್ದಡಗಿಸಲು ಇಡಿ ಬಳಸಿಕೊಳ್ಳುತ್ತಿದ್ದಾರೆ. ಸಹಕಾರ ಇಲಾಖೆಯ ವಿಷಯದಲ್ಲೂ ಅದೇ ಆಗುತ್ತದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದರು.
ಈ ಮೊದಲು ಸಹಕಾರ ಸಚಿವಾಲಯ ಕೃಷಿ ಜೊತೆಯಲ್ಲಿತ್ತು. ಆದರೆ ಸದ್ಯ ಕೇಂದ್ರ ಸರ್ಕಾರ ಅದನ್ನು ಪ್ರತ್ಯೇಕಗೊಳಿಸಿದೆ. ಇದರ ಜೊತೆಗೆ ಅಮಿತ್ ಶಾ ಅವರಿಗೆ ಅದರ ಹೊಣೆಗಾರಿಕೆ ನೀಡಲಾಗಿದೆ. ಇದರಿಂದ ಬಿಜೆಪಿ ಉದ್ದೇಶ ಸ್ಪಷ್ಟವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾವು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತೇವೆ. ಸರ್ಕಾರವು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿ ಹೊಂದುತ್ತಿರುವ ವಲಯವನ್ನು ರಕ್ಷಿಸುವ ಅಗತ್ಯವಿದೆ ಎಂದು ಖರ್ಗೆ ತಿಳಿಸಿದ್ದಾರೆ.

Latest Indian news

Popular Stories

error: Content is protected !!