ಸುಸ್ಥಿರ ಅಭಿವೃದ್ಧಿಗೆ ಜನಸಂಖ್ಯೆ ನಿಯಂತ್ರಣ ಅಗತ್ಯ: ಯೋಗಿ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ವಿಶ್ವ ಜನಸಂಖ್ಯಾ ದಿನಾಚರಣೆಯಂದು ತಮ್ಮ ಅಧಿಕೃತ ನಿವಾಸದಲ್ಲಿ 2021-2030ರ ಹೊಸ ಜನಸಂಖ್ಯಾ ನೀತಿಯನ್ನು ಅನಾವರಣಗೊಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಆದಿತ್ಯನಾಥ್, ಜನಸಂಖ್ಯಾ ಹೆಚ್ಚಳವು ಅಭಿವೃದ್ಧಿಗೆ ಅಡಚಣೆಯಾಗಿದೆ ಎಂದರು.
ಪ್ರಪAಚದಾದ್ಯAತ ಕಾಲಕಾಲಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯು ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಲಾಗಿದೆ. ಕಳೆದ ನಾಲ್ಕು ದಶಕಗಳಿಂದ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಆದಿತ್ಯನಾಥ್ ಹೇಳಿದರು.
ಈ ದಿಕ್ಕಿನಲ್ಲಿ ಪ್ರಯತ್ನ ಮಾಡಿದ ದೇಶಗಳು ಮತ್ತು ರಾಜ್ಯಗಳು ಸಕಾರಾತ್ಮಕ ಫಲಿತಾಂಶಗಳನ್ನು ಕಂಡಿವೆ. ಆದಾಗ್ಯೂ, ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳು ಅಗತ್ಯವಾಗಿವೆ ಎಂದು ಯೋಗಿ ಆದಿತ್ಯನಾಥ್ ಅವರು ಹೇಳಿದರು. ಯುಪಿ ಸರ್ಕಾರವು ಸಮಾಜದ ಎಲ್ಲಾ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ಜಾರಿಗೆ ತರುತ್ತಿದೆ. ಜನಸಂಖ್ಯೆಯ ನಿಯಂತ್ರಣ ಮಸೂದೆಯ ಕರಡನ್ನು ರಾಜ್ಯ ಕಾನೂನು ಆಯೋಗದ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಹೆಚ್ಚು ಸಮನಾದ ವಿತರಣೆಯೊಂದಿಗೆ ಸುಸ್ಥಿರ ಅಭಿವೃದ್ಧಿಯ ಉತ್ತೇಜನಕ್ಕಾಗಿ ರಾಜ್ಯದ ಜನಸಂಖ್ಯೆಯನ್ನು ನಿಯಂತ್ರಿಸುವುದು ಮತ್ತು ಸ್ಥಿರಗೊಳಿಸುವುದು ಅಗತ್ಯ ಎಂದು ಈ ಕರಡಿನಲ್ಲಿ ಹೇಳಲಾಗಿದೆ.
ಹಾಲಿ ರಾಜ್ಯದಲ್ಲಿನ ಫರ್ಟಿಲಿಟಿ ರೇಟ್ ಶೇ. 2.7 ಇದ್ದು, ಹೆಚ್ಚುತ್ತಿರುವ ಜನಸಂಖ್ಯೆಯು ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅಡಚಣೆಯಾಗುತ್ತದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಜನಸಂಖ್ಯೆಯ ಏರಿಕೆಯು ಬಡತನಕ್ಕೂ ಸಂಬAಧಿಸಿದೆ. ಪ್ರತಿಯೊಂದು ಸಮುದಾಯವನ್ನು ಜನಸಂಖ್ಯಾ ನೀತಿ 2021-2030 ರಲ್ಲಿ ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ನೀತಿಯನ್ನು ಅನುಸರಿಸಬೇಕು, ಜೊತೆಗೆ ಎರಡು ಮಕ್ಕಳ ನಡುವೆ ಅಂತರವನ್ನು ಪಾಲಿಸಬೇಕು’ ಎಂದಿದ್ದಾರೆ.
ಯುಪಿ ಸರ್ಕಾರವು ಜನಸಂಖ್ಯಾ ನೀತಿಯನ್ನು ರೂಪಿಸುವ ಕಾರ್ಯವನ್ನು 2018 ರಿಂದ ಕೈಗೆತ್ತಿಕೊಂಡಿದೆ. ಎರಡೇ ಮಕ್ಕಳಿರುವ ದಂಪತಿಗಳಿಗೆ ವಿವಿಧ ಸವಲತ್ತುಗಳನ್ನು ನೀಡುವ ಮತ್ತು ಎರಡಕ್ಕಿಂತ ಹೆಚ್ಚು ಮಕ್ಕಳುಳ್ಳ ಜನರಿಗೆ ಸವಲತ್ತುಗಳನ್ನು ನಿರ್ಬಂಧಿಸುವ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಕೂಡ ರಾಜ್ಯದ ಕಾನೂನು ಆಯೋಗ ಈಗಾಗಲೇ ಸಿದ್ಧಪಡಿಸಿದೆ.
ಜನಸಂಖ್ಯಾ ನಿಯಂತ್ರಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು, ಡಿಜಿಟಲ್ ಪ್ರಕ್ರಿಯೆ ಬಳಸಿಕೊಂಡು ಕಡ್ಡಾಯವಾಗಿ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಮರಣಗಳ ನೋಂದಣಿ ಮಾಡಿಸುವುದು ಮುಂತಾದ ಕ್ರಮಗಳನ್ನು ಈ ನೀತಿ ಒಳಗೊಂಡಿದೆ. ಹಿರಿಯ ನಾಗರಿಕರ ರಕ್ಷಣೆಗೆ ಹೆಚ್ಚಿನ ಸೌಲಭ್ಯಗಳು, 11 ರಿಂದ 19 ವರ್ಷದ ವಯಸ್ಸಿನವರಿಗೆ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕ ಆಹಾರ ಒದಗಿಸುವುದು ಮತ್ತು ಶಾಲೆಗಳಲ್ಲಿ ಹೆಲ್ತ್ ಕ್ಲಬ್‌ಗಳನ್ನು ಆರಂಭಿಸುವುದು ಈ ನೀತಿಯಲ್ಲಿ ಪ್ರಸ್ತಾಪಗೊಂಡಿರುವ ಇತರ ಕ್ರಮಗಳು.
ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ 2021 ರಿಂದ 2030 ರವರೆಗೆ ನಿರ್ದಿಷ್ಟ ಸಾಧನೆಯ ಪಥವನ್ನು ರೂಪಿಸಿರುವ ಈ ನೀತಿಯಲ್ಲಿ, 2026 ರೊಳಗೆ ಜನನ ದರವನ್ನು 2.1 ಕ್ಕೆ ಮತ್ತು 2030 ರೊಳಗೆ 1.9 ಕ್ಕೆ ಇಳಿಸುವ ಗುರಿಯನ್ನು ಪ್ರಚುರಪಡಿಸಲಾಗಿದೆ.

Latest Indian news

Popular Stories