ಕೈಗೆಟುಕುವ ದರದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ನೀಡಿ: ಸಿದ್ದರಾಮಯ್ಯ

ಬೆಂಗಳೂರು : ಕೊರೋನಾದ 3 ನೇ ಅಲೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಜನರು ಹಸಿವಿನಿಂದ ನರಳದಂತೆ ನೋಡಿಕೊಳ್ಳಬೇಕು. ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಜನರಿಗೆ ಕೈಗೆಟುಕುವ ದರಗಳಲ್ಲಿ ನೀಡಬೇಕು. ಅಗತ್ಯ ಇರುವವರನ್ನು ಗುರ್ತಿಸಿ ಅವರಿಗೆ ಉಚಿತವಾಗಿ ಪೌಷ್ಟಿಕ ಆಹಾರವನ್ನು ಒದಗಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಉತ್ತಮ ಆಹಾರವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯಿದ್ದರೆ ಕೊರೋನಾದಂತಹ ಮಾರಣಾಂತಿಕ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೋವಿಡ್ ಮೊದಲ ಮತ್ತು ಎರಡನೆ ಅಲೆಗಳು ರಾಷ್ಟç ಮತ್ತು ರಾಜ್ಯದ ಜನರ ಮೇಲೆ ಮಾರಣಾಂತಿಕ ಪರಿಣಾಮಗಳನ್ನು ಬೀರಿವೆ. ದೇಶದಲ್ಲಿ ಸೂತಕದ ವಾತಾವರಣ ಮುಗಿಯುವ ಮೊದಲೆ, ವೈರಾಣು ಮತ್ತು ಸಾಂಕ್ರಾಮಿಕ ರೋಗಗಳ ತಜ್ಞರು ಹಾಗೂ ಆರೋಗ್ಯ ಕ್ಷೇತ್ರದ ಪರಿಣತರು ಮೂರನೇ ಅಲೆಯ ಕುರಿತು ಆತಂಕದ ಮಾತುಗಳನ್ನಾಡುತ್ತಿದ್ದಾರೆ. ಬರಲಿರುವ ಮೂರನೇ ಅಲೆಯು ಮಕ್ಕಳ ಮೇಲೆ ಹಾಗೂ ಮೊದಲ ಎರಡು ಅಲೆಗಳಲ್ಲಿ ಕೊರೋನಾದಿಂದ ಬಚಾವಾದವರ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆ ಇರುವುದಾಗಿ ಅಂದಾಜು ಮಾಡಲಾಗಿದೆ. ಇವೆಲ್ಲವುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ರಾಜ್ಯದ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಅಪೌಷ್ಟಿಕತೆಯ ಸಮಸ್ಯೆಯನ್ನೆದುರಿಸುತ್ತಿದ್ದಾರೆ. ಅಪೌಷ್ಟಿಕತೆಯು ಮಾರಣಾಂತಿಕವಾದ ಗಂಭೀರ ಸಮಸ್ಯೆಗಳಿಗೆ ಮಕ್ಕಳು ಮತ್ತು ಯುವಜನತೆಯನ್ನು ದೂಡುತ್ತಿದೆ. ಕೊರೋನ ನೆಪದಲ್ಲಿ ಅಂಗನವಾಡಿಯಲ್ಲಿ ನೀಡುತ್ತಿದ್ದ ಪೌಷ್ಟಿಕ ಆಹಾರ ಮತ್ತು ಶಾಲೆಗಳಲ್ಲಿ ತಯಾರಿಸುತ್ತಿದ್ದ ಬಿಸಿಯೂಟವನ್ನು ನಿಲ್ಲಿಸಿದ್ದರಿಂದಾಗಿ ಅಪೌಷ್ಟಿಕತೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ ಎಂದು ಮಾಜಿ ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.
ಮೂರು ನಾಲ್ಕು ತಿಂಗಳಿಗೊಮ್ಮೆ ಅಕ್ಕಿ ಮುಂತಾದ ಆಹಾರ ಪದಾರ್ಥಗಳನ್ನು ಮನೆಗಳಿಗೆ ನೀಡುತ್ತಿರುವುದರಿಂದ ಮಕ್ಕಳಿಗೆ ಸಿಗಬೇಕಾದ ಆಹಾರ ಸಮರ್ಪಕವಾಗಿ ಸಿಗುತ್ತಿಲ್ಲ. ರಾಜ್ಯದ ಮಕ್ಕಳು, ಮಹಿಳೆಯರು ಹಾಗೂ ಯುವಜನರಲ್ಲಿನ ಅಪೌಷ್ಟಿಕತೆಯ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ ಎಂದವರು ತಿಳಿಸಿದ್ದಾರೆ.
1000 ಮಕ್ಕಳಲ್ಲಿ 25 ಮಕ್ಕಳು 5 ವರ್ಷ ತುಂಬುವ ಮೊದಲೆ ಮರಣ ಹೊಂದುತ್ತಿದ್ದಾರೆ. ಗ್ರಾಮೀಣ ಕರ್ನಾಟಕದಲ್ಲಿ 28 ಮಕ್ಕಳು ಮರಣ ಹೊಂದುತ್ತಿದ್ದಾರೆ. ಒಕ್ಕೂಟ ಸರ್ಕಾರದ ಸುಸ್ಥಿರ ಅಭಿವೃದ್ಧಿ ಗುರಿ 2020-21ರ ಸಮೀಕ್ಷೆಯ ಪ್ರಕಾರ ಈ ವಯಸ್ಸಿನ ಮಕ್ಕಳ ಮರಣ ಪ್ರಮಾಣ ಶೇ. 28 ರಷ್ಟಿದೆ. 2019-20ಕ್ಕೆ ಹೋಲಿಸಿದರೆ ಈ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇ. 40ಕ್ಕಿಂತ ಹೆಚ್ಚು ಇರುವ ಜಿಲ್ಲೆಗಳಲ್ಲಿ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಧಾರವಾಡ ಮುಂತಾದವು ಸೇರಿವೆ. ರಾಜ್ಯದ ಸರಾಸರಿ ಪ್ರಮಾಣ ಶೇ.32 ರಷ್ಟಿದೆ. ತೀವ್ರ ಅಪೌಷ್ಟಿಕತೆಯುಳ್ಳವರಲ್ಲಿ ಶೇ. 25 ರಷ್ಟು ಮಕ್ಕಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೆ ಇದ್ದಾರೆ ಎನ್ನುವುದು ಕಳವಳಕಾರಿ ಸಂಗತಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Latest Indian news

Popular Stories