ರಮೇಶ್ ಜಾರಕಿಹೊಳಿ ಪ್ರಕರಣ : ರಾಜ್ಯಪಾಲರ ಮಧ್ಯ ಪ್ರವೇಶಕ್ಕೆ ಮಹಿಳಾ ಕಾಂಗ್ರೆಸ್ ಒತ್ತಾಯ

ಮಡಿಕೇರಿ ಮೇ ೩೧ : ಶಾಸಕ ರಮೇಶ್ ಜಾರಕಿಹೊಳಿ ಅವರ ಪ್ರಕರಣ ಸರ್ಕಾರದ ಕೃಪಾ ಕಟಾಕ್ಷದಿಂದ ಹಾದಿ ತಪ್ಪುತ್ತಿದ್ದು, ಸಂತ್ರಸ್ತೆಗೆ ನ್ಯಾಯ ಸಿಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ನೊಂದ ಯುವತಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಅವರು ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ರಮೇಶ್ ಜಾರಕಿಹೊಳಿ ಅವರನ್ನು ಆರೋಪ ಮುಕ್ತಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ಬಯಲಾದಾಗ ವಿಡಿಯೋ ದೃಶ್ಯಾವಳಿಗಳಲ್ಲಿರುವ ವ್ಯಕ್ತಿ ನಾನಲ್ಲ, ರಾಜಕೀಯ ವಿರೋಧಿಗಳು ತಂತ್ರ ಹೆಣೆದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರು ತನಿಖೆಯ ಹಾದಿ ತಪ್ಪಿಸುತ್ತಲೇ ಬಂದರು. ಇದೀಗ ಆ ದೃಶ್ಯಾವಳಿಗಳಲ್ಲಿರುವುದು ನಾನೇ ಎಂದು ಒಪ್ಪಿಕೊಳ್ಳುವ ಮೂಲಕ ತನಿಖಾಧಿಕಾರಿಗಳನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ. ಪ್ರಕರಣದಲ್ಲಿ ಗೃಹ ಸಚಿವರು ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಮುಖ್ಯಮಂತ್ರಿಗಳ ಹೇಳಿಕೆಯೂ ರಮೇಶ್ ಜಾರಕಿಹೊಳಿ ಅವರ ಪರವಾಗಿದೆ. ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ ಈ ಸರ್ಕಾರದಿಂದ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುವ ಸಾಧ್ಯತೆಗಳೇ ಕ್ಷೀಣ ಸಿದೆ ಎಂದು ಅವರು ಟೀಕಿಸಿದ್ದಾರೆ.
ಸಂತ್ರಸ್ತ ಯುವತಿ ನ್ಯಾಯ ಸಿಗದೆ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಆರೋಪ ಎದುರಿಸುತ್ತಿರುವ ಜಾರಕಿಹೊಳಿ ಅವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈ ಪ್ರಕರಣ ಸಮಾಜದಲ್ಲಿ ಅಸಹ್ಯವನ್ನು ಮೂಡಿಸಿದೆ ಅಲ್ಲದೆ, ಆರೋಪಿ ಸ್ಥಾನದಲ್ಲಿರುವವರು ಯಾವುದೇ ಮುಜುಗರವಿಲ್ಲದೆ ಧೈರ್ಯವಾಗಿರಬಹುದು ಎನ್ನುವ ತಪ್ಪು ಸಂದೇಶವನ್ನು ನೀಡಿದೆ. ಆದ್ದರಿಂದ ರಾಜ್ಯಪಾಲರು ಹಾಗೂ ಮಹಿಳಾ ಆಯೋಗ ಮಧ್ಯ ಪ್ರವೇಶ ಮಾಡಿ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಮತ್ತು ರಮೇಶ್ ಜಾರಕಿಹೊಳಿ ಅವರನ್ನು ಶಾಸಕ ಸ್ಥಾನದಿಂದಲೂ ವಜಾಗೊಳಿಸಬೇಕೆಂದು ಸುರಯ್ಯ ಅಬ್ರಾರ್ ಒತ್ತಾಯಿಸಿದ್ದಾರೆ. ಫೋಟೋ :: ಸುರಯ್ಯ

Latest Indian news

Popular Stories