ಪ್ರವಾಹಪೀಡಿತ ಹಳ್ಳಿಗಳ ಸ್ಥಳಾಂತರ: ನಿರಾಣಿ

ಕಲಬುರಗಿ : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಮುಳುಗುವ ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಇಲ್ಲಿ ಹೇಳಿದರು.
ನಗರದ ಐವಾನ್-ಈ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜನ ಮತ್ತು ಜಾನುವಾರು ರಕ್ಷಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲೂ ಪರಿಹಾರ ಕಾರ್ಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ತಗ್ಗುಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಜಿಲ್ಲೆಯಾದ್ಯAತ ಇನ್ನು ಮೂರು ದಿನ ಹೆಚ್ಚಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ತಗ್ಗುಪ್ರದೇಶ ಇಲ್ಲವೇ ನದಿಪಾತ್ರಗಳಲ್ಲಿದ್ದರೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಅಣೆಕಟ್ಟು, ನದಿ, ಹಳ್ಳಕೊಳ್ಳಗಳು ಭರ್ತಿಯಾಗುತ್ತಿವೆ. ಕೃಷ್ಣ, ಭೀಮಾ ಮತ್ತು ಆಲಮಟ್ಟಿ ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಆಚೆ ಬರಬಾರದು. ಈಗಾಗಲೇ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೊಂಡಿದ್ದೇವೆ. ಯಾರೊಬ್ಬರೂ ಆತಂಕ ಪಡಬೇಡಿ ಎಂದು ಸಲಹೆ ಮಾಡಿದರು.

Latest Indian news

Popular Stories