ಸೆಕ್ಷನ್ 66 ಎ ಅಡಿ ಪ್ರಕರಣ, ಸುಪ್ರೀಂ ಕೋರ್ಟ್ ಅಚ್ಚರಿ

ನವದೆಹಲಿ: ಕೋರ್ಟ್ ರದ್ದುಪಡಿಸಿದ ಸೆಕ್ಷನ್ 66ಎ ಐಟಿ ಕಾಯ್ದೆಯಡಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ 2015ರಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ರದ್ದುಗೊಳಿಸಿದ್ದ ಐಟಿ ಕಾಯಿದೆಯ ಸೆಕ್ಷನ್ 66ಎ ಅನ್ವಯ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸುವ ಪದ್ಧತಿಯನ್ನು ಮುಂದುವರಿಸಿರುವ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ಅಸಮಾಧಾನ ಮತ್ತು ಆಘಾತ ವ್ಯಕ್ತಪಡಿಸಿದೆ.
ಸೆಕ್ಷನ್ 66ಎ ಅನ್ವಯ ರದ್ದುಗೊಳಿಸಲಾದ ನಿಬಂಧನೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗುತ್ತಿರುವುದರಿಂದ ಈ ಕುರಿತು ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಆಗ್ರಹಿಸಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರಟೀಸ್ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜಸ್ಟಿಸ್ ಆರ್ ಎಫ್ ನಾರಿಮನ್ ಅವರ ನೇತೃತ್ವದ ಪೀಠ ವಿಚಾರಣೆ ನಡೆಸುವ ವೇಳೆ ಮೇಲಿನಂತೆ ಆಘಾತ ವ್ಯಕ್ತಪಡಿಸಿದ್ದು, ಶ್ರೇಯಾ ಸಿಂಘಾಲ್ ತೀರ್ಪು 2015ರಲ್ಲಿ ಬಂದಿದೆ. ಈಗ ನಡೆಯುತ್ತಿರುವುದು ಅಚ್ಚರಿ ಮತ್ತು ಅಘಾತಕಾರಿ ಎಂದು ಹೇಳಿದೆ.
21 ಝಾಂಬಿ ಟ್ರ‍್ಯಾಕರ್ ವೆಬ್ಸೈಟ್‌ನ ಆವಿಷ್ಕಾರಗಳನ್ನು ಉಲ್ಲೇಖಿಸಿ, ಮಾರ್ಚ್ 10, 2021 ರ ಹೊತ್ತಿಗೆ, ಸುಮಾರು 745 ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ ಮತ್ತು ಜಿಲ್ಲಾ ನ್ಯಾಯಾಲಯಗಳ ಮುಂದೆ ಇವು ಸಕ್ರಿಯವಾಗಿವೆ, ಇದರಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 ಎ ಅಡಿಯಲ್ಲಿ ಆರೋಪಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ದೇಶಾದ್ಯಂತ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಸೆಕ್ಷನ್ 66 ಎ ಅಡಿಯಲ್ಲಿ ದಾಖಲಾದ ಎಫ್‌ಐಆರ್ ಮತ್ತು ಪ್ರಕರಣಗಳ ಎಲ್ಲಾ ಡೇಟಾವನ್ನು ಸಂಗ್ರಹಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ. ಶ್ರೇಯಾ ಸಿಂಘಾಲ್ ವಿ. ಯೂನಿಯನ್ ಆಫ್ ಇಂಡಿಯಾದಲ್ಲಿನ ತೀರ್ಪಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಹೈಕೋರ್ಟ್ಗಳಿಗೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
2015 ರ ತೀರ್ಪನ್ನು ಪಾಲಿಸಬೇಕೆಂದು ಕೋರಿ ಎನ್‌ಜಿಒ 2018 ರಲ್ಲಿ ಇದೇ ರೀತಿಯ ಮನವಿ ಸಲ್ಲಿಸಿತ್ತು.
ಸೆಕ್ಷನ್ 166 ಅಡಿಯ ನಿಬಂಧನೆಯನ್ನು ರದ್ದುಗೊಳಿಸಿದ ನಂತರವೂ ದೇಶದ ವಿವಿಧ ಭಾಗಗಳಲ್ಲಿ 1000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಅಪೀಲುದಾರರ ಪರ ವಕೀಲರಾದ ಅಪರ್ಣಾ ಭಟ್ ಹೇಳಿದಾಗ, ನಾವು ನೋಟಿಸ್ ಜಾರಿಗೊಳಿಸುತ್ತೇವೆ ಎಂದು ಜಸ್ಟಿಸ್ ನಾರಿಮನ್ ಹೇಳಿದರು.
ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ತಮ್ಮ ವಾದ ಮಂಡಿಸುತ್ತಾ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠ ನಿಬಂಧನೆಯನ್ನು ರದ್ದುಗೊಳಿಸಿದ್ದರೂ ಅದು ಇನ್ನೂ ಕಾಯಿದೆಯ ಭಾಗವಾಗಿದೆ, ಕೇವಲ ಟಿಪ್ಫಣಿಯಲ್ಲಿ ಅದನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂಬ ಉಲ್ಲೇಖವಿದೆ. ಏನಿದ್ದರೂ ಪೊಲೀಸರು ಆ ಟಿಪ್ಪಣಿಯನ್ನು ನೋಡುವುದಿಲ್ಲ ಎಂದು ಹೇಳಿದರು.
ಈ ಕುರಿತಂತೆ ಕೌಂಟರ್ ಅಫಿಡವಿಟ್ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಜಸ್ಟಿಸ್ ನಾರಿಮನ್ ವಿಚಾರಣೆಯನ್ನು ಎರಡು ವಾರಗಳ ನಂತರ ನಿಗದಿ ಪಡಿಸಿದ್ದಾರೆ. ಅಲ್ಲದೆ ಈ ಕುರಿತು ತಾವೇ ಏನಾದರೂ ಮಾಡುತ್ತೇವೆ ಎಂದೂ ಅವರು ಹೇಳಿದರು.
ಐಟಿ ಕಾಯಿದೆಯ ರದ್ದುಗೊಳಿಸಲಾದ ಸೆಕ್ಷನ್ 66ಎ ಅಡಿಯಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್ ಕುರಿತಾದ ಅಂಕಿಅAಶ ಸಂಗ್ರಹಿಸುವAತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ಪಿಯುಸಿಎಲ್ ತನ್ನ ಅಪೀಲಿನಲ್ಲಿ ಕೋರಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66 ಎ ಬಳಕೆ ಕುರಿತಾಗಿ ಸುಪ್ರೀಂ ಕೋರ್ಟ್ ಇಂದು ನೋಟಿಸ್ ಜಾರಿಗೊಳಿಸಿದೆ.
ಫೆಬ್ರವರಿ 15, 2019 ರಲ್ಲಿ, ಶ್ರೇಯಾ ಸಿಂಘಾಲ್ ತೀರ್ಪಿನ ಪ್ರತಿಗಳನ್ನು ಈ ದೇಶದ ಪ್ರತಿ ಹೈಕೋರ್ಟ್ನಿಂದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಲಭ್ಯವಾಗುವಂತೆ ನಿರ್ದೇಶಿಸುವ ಮೂಲಕ ಸುಪ್ರೀಂ ಕೋರ್ಟ್ ಈ ವಿಷಯವನ್ನು ವಿಲೇವಾರಿ ಮಾಡಿತು. ತೀರ್ಪಿನ ಪ್ರತಿಗಳನ್ನು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಲಭ್ಯವಾಗುವಂತೆ ಕೇಂದ್ರಕ್ಕೆ ನಿರ್ದೇಶಿಸಲಾಯಿತು. ಮುಖ್ಯ ಕಾರ್ಯದರ್ಶಿಗಳು, ಪ್ರತಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ತೀರ್ಪಿನ ಪ್ರತಿಗಳನ್ನು ಕಳುಹಿಸುವ ಮೂಲಕ ಪೊಲೀಸ್ ಇಲಾಖೆಗಳನ್ನು ಸೂಕ್ಷ್ಮಗೊಳಿಸಲು ನಿರ್ದೇಶಿಸಲಾಯಿತು.

Latest Indian news

Popular Stories

error: Content is protected !!