ಸಿಎಎ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಯುವಕನ ಬಂಧನ

ಗುರುಗ್ರಾಮ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನಾಕಾರರ ಮೇಲೆ ಕಳೆದ ವರ್ಷ ಗುಂಡು ಹಾರಿಸಿದ್ದ ಮತ್ತು ಕಳೆದ ವಾರ ಪಟೌಡಿಯಲ್ಲಿ ನಡೆದ ಮಹಾ ಪಂಚಾಯತ್‌ನಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದ್ದ ಯುವಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಎರಡನೇ ಬಾರಿಗೆ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಬಾರಿ ಜಾಮಿಯಾ ಮಿಲ್ಲಿಯಾ ಮಸೀದಿ ಬಳಿ ಗುಂಡು ಹಾರಾಟ ನಡೆಸಿದ್ದ ವೇಳೆ 18 ವರ್ಷ ತುಂಬಿರದ ಹಿನ್ನೆಲೆಯಲ್ಲಿ ಈತನನ್ನು ಬಾಲಾಪರಾಧಿಯಾಗಿ ಪರಿಗಣಿಸಿ ವಿಚಾರಣೆಗೆ ಗುರಿಪಡಿಸಲಾಗಿತ್ತು. ಆದರೆ ಈ ಬಾರಿ ವಯಸ್ಕನಾಗಿರುವ ಆರೋಪಿ ಯುವಕನನ್ನು ಬಂಧಿಸಲಾಗಿದೆ.
ಪಟೌಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ ಯುವಕನನ್ನು ಆತನ ಸ್ವಂತ ಊರಾದ ಗೌತಮ ಬುದ್ಧ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಎರಡು ಕೋಮುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು ನೀಡುವುದು), 295ಎ (ದುರುದ್ದೇಶಪೂರ್ವಕ ಕೃತ್ಯ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
`ಲವ್ ಜಿಹಾದ್’ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಆರೋಪಿ ಮುಸ್ಲಿಂ ಸಮುದಾಯದ ಮೇಲೆ ದಾಳಿ ಮಾಡುವಂತೆ ಕರೆ ನೀಡಿದ್ದ. ಈ ಸಭೆಗೆ ಆರೋಪಿಯನ್ನು ಕರೆದಿರಲಿಲ್ಲ, ಆತ ಸ್ವಯಂಪ್ರೇರಿತವಾಗಿ ಆಗಮಿಸಿದ್ದ ಎಂದು ಸಂಘಟಕರು ಸಮುಜಾಯಿಷಿ ನೀಡಿದ್ದಾರೆ. ಪಟೌಡಿಯ ರಾಮಲೀಲಾ ಮೈದಾನದಲ್ಲಿ ಜುಲೈ 4ರಂದು ಈ ಮಹಾ ಪಂಚಾಯತ್ ನಡೆದಿತ್ತು. ಯುವಕನ ಭಾಷಣದ ವಿಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಿಲಾಸ್ಪುರ ನಿವಾಸಿಯೊಬ್ಬರು ಪಟೌಡಿ ಠಾಣೆಯಲ್ಲಿ ಯುವಕನ ವಿರುದ್ಧ ದೂರು ನೀಡಿದ್ದರು. ಗುರುಗ್ರಾಮ ನ್ಯಾಯಾಲಯ ಮುಂದೆ ಯುವಕನನ್ನು ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Latest Indian news

Popular Stories