ಪಾರಣ ಹಬ್ಬಕ್ಕೆ ಕೊರೋನಾ ಕರಿನೆರಳು 2ನೇ ವರ್ಷವೂ ಸಂಭ್ರಮವಿಲ್ಲದೆ ಸರಿದುಹೋದ ಸಾಂಪ್ರದಾಯಿಕ ಆಚರಣೆ

ಮುಂದಿನ ವರ್ಷವಾದರೂ ಕೊರೋನಾ ಮುಕ್ತ ಪಾರಣ ಆಚರಣೆಯಾಗಲಿ: ಗ್ರಾಮಸ್ಥರ ಆಶಯ

ವಿಶೇಷ ವರದಿ: ರಫೀಕ್ ತೂಚಮಕೇರಿ

ಪೊನ್ನಂಪೇಟೆ, ಜೂ.01: ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವಾಗಿ ಪ್ರತಿ ವರ್ಷ ಜೂನ್ 1ರಂದು ಜರುಗುವ ಇತಿಹಾಸ ಪ್ರಸಿದ್ಧ ‘ಪಾರಣ ಮಾನಿ’ ಹಬ್ಬ ಈ ಬಾರಿಯೂ ಕೋವಿಡ್-19ರ ಭೀತಿಯಿಂದಾಗಿ ನಡೆಯಲಿಲ್ಲ. ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಸಾಂಪ್ರದಾಯಕ ಪಾರಣ ಮಾನಿ ಬೇಡು ಹಬ್ಬವನ್ನು ನಡೆಸದಿರಲು ಗ್ರಾಮಸ್ಥರೇ ತೀರ್ಮಾನ ಕೈಗೊಂಡಿದ್ದರು. ಇದರಿಂದಾಗಿ ಸತತ 2ನೇ ವರ್ಷವೂ ಈ ಭಾಗದ ಹಲವು ಗ್ರಾಮಸ್ಥರ ಸಂಭ್ರಮದ ಪ್ರತೀಕವಾಗಿದ್ದ ಪಾರಣ ಹಬ್ಬ ನಡೆಯದ ವರ್ಷಧಾರೆ ಸರಿದು ಹೋದಂತಾಗಿದೆ.

ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೋವಿಡ್-19 ಎಂಬ ಮಹಾಮಾರಿಯ ನಿಯಂತ್ರಣಕ್ಕಾಗಿ ಇಡೀ ದೇಶದ ಜನರೇ ಸಹಕರಿಸುತ್ತಿರುವ ಈ ಸಂದರ್ಭದಲ್ಲಿ ಪಾರಣ ಮಾನಿ ಹಬ್ಬವನ್ನು ಆಚರಿಸದೆ ಬೇರಳಿನಾಡಿನ ಜನತೆ ಸಹಕಾರ ನೀಡಬೇಕಿರುವುದು ಈ ವರ್ಷವೂ ಅನಿವಾರ್ಯವಾಗಿತ್ತು. ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದ ಈ ಮಹಾಮಾರಿ ಸೋಂಕಿನ ನಿರ್ಮೂಲನೆಗಾಗಿ ಕೈಜೋಡಿಸುವುದೇ ಇದರ ಉದ್ದೇಶವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿರುವ ಬೇರಳಿನಾಡಿನ ಗ್ರಾಮಸ್ಥರು, ಮುಂದಿನ ವರ್ಷವಾದರೂ ಕೊರೋನಾ ಮುಕ್ತ ವಾತವರಣದಲ್ಲಿ ಐತಿಹಾಸಿಕ ಪಾರಣ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅವಕಾಶವಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಪ್ರತಿವರ್ಷ ಈ ಐತಿಹಾಸಿಕ ಪಾರಣ ಹಬ್ಬವು ಮೇ.31 ಮತ್ತು ಜೂನ್ 01ರಂದು ಬೇರಳಿನಾಡಿನಾದ್ಯಂತ ಅದ್ಧೂರಿಯಾಗಿ ನಡೆಯುತ್ತದೆ. ಈ ಪ್ರದೇಶಕ್ಕೆ ಸಂಬಂಧಿಸಿದ ಜನತೆ ದೇಶದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಈ ದಿನದಂದು ತಮ್ಮ ಊರಿಗೆ ಮರಳಿ ಈ ಪಾರಣ ಹಬ್ಬದ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ದಕ್ಷಿಣ ಕೊಡಗಿನಲ್ಲಿ ನಡೆಯುವ ಕೊನೆಯ ಬೇಡು ಹಬ್ಬವಾದ ಪಾರಣ ಮಾನಿ ಹಬ್ಬಕ್ಕೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯಿದೆ. ಈ ಕಾರಣದಿಂದ ಬೇರಳಿನಾಡಿನ ಜನತೆ ವಯಸ್ಸಿನ ಮಿತಿಯಿಲ್ಲದೆ ಈ ಉತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಆದರೆ ಸತತ 2ನೇ ವರ್ಷ ಪಾರಣದ ಸಂಭ್ರಮ ಇಲ್ಲದಿರುವುದು ಈ ಭಾಗದ ಜನತೆಗೆ ತೀವ್ರ ನಿರಾಸೆ ತಂದಿದೆ.

ಜೂನ್ 01ರಂದು ಬೇರಳಿನಾಡಿನ ಯಾವುದೇ ಪ್ರದೇಶದಲ್ಲಿ ನೋಡಿದರೂ ಪಾರಣ ನಮ್ಮೆಯ (ಹಬ್ಬದ) ವೇಷಧಾರಿಗಳ ಸಾಂಪ್ರದಾಯಿಕ ನೃತ್ಯ ಸಾಮಾನ್ಯವಾಗಿರುತಿತ್ತು. ಪಾರಂಪಾರಿಕ ಹಾಡುಗಳನ್ನು ಹಾಡುತ್ತಾ ಗ್ರಾಮದ ಪುರಾತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಅದನ್ನು ಜೀವಂತವಾಗಿರಿಸುವ ಪ್ರಯತ್ನದಲ್ಲಿ ಬೇರಳಿನಾಡಿನ ಜನತೆ ಮಗ್ನರಾಗಿರುತ್ತಾರೆ. ವೈಶಿಷ್ಟಪೂರ್ಣ ಜನಪದೀಯ ಸೊಗಡಿನ ಪಾರಣ ಹಬ್ಬದ ಕಲರವದಿಂದಾಗಿ ಬೇಡು ಹಬ್ಬಕ್ಕೆ ವಿಶೇಷ ಕಳೆ ಬರುತ್ತಿತ್ತು. ಪಾರಣ ಹಬ್ಬ ಎಂದಿನಂತೆ ನಡೆದಿದ್ದರೆ ಇಂದು ಸಂಜೆ ಅದಕ್ಕೆ ವರ್ಣರಂಜಿತವಾದ ತೆರೆ ಬೀಳಬೇಕಿತ್ತು.

ಇತಿಹಾಸ ಪ್ರಸಿದ್ಧ ಪಾರಣ ಮಾನಿ ಬೇಡು ಹಬ್ಬದಲ್ಲಿ ಎರಡು ದಿನಗಳ ಕಾಲ ಸಂಭ್ರಮಿಸುವ ಗ್ರಾಮಸ್ಥರು ಕೊನೆಯ ದಿನದ ಸಂಜೆ ದಕ್ಷಿಣ ಕೊಡಗಿನ ಕೊನೆಯ ಬೇಡು ಹಬ್ಬವನ್ನು ವಿಶಿಷ್ಟವಾಗಿ ಬೀಳ್ಕೊಡುತ್ತಾರೆ. ‘ಕುಂದತ್ ಬೊಟ್ಟಲ್ ನೇಂದ ಕುದುರೆ, ಪಾರಾಣ ಮಾನಿಲ್ ಅಳಂಜ ಕುದುರೆ’ ಎಂಬುವುದು ಕೊಡವರ ಪ್ರಸಿದ್ಧ ನಾಣ್ನುಡಿ. ಪಾರಣ ಮಾನಿಯಲ್ಲಿ ಈ ಹಬ್ಬಕ್ಕೆ ತೆರೆ ಬೀಳುವುದರೊಂದಿಗೆ ಕುಂದ ಬೆಟ್ಟದಲ್ಲಿ ಆರಂಭಗೊಳ್ಳುವ ಬೇಡು ಹಬ್ಬ ಈ ಮಾನಿಯಲ್ಲಿ ಮುಕ್ತಾಯಗೊಂಡಂತಾಗುತ್ತದೆ.
ಪಾರಣ ಬೇಡು ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ಕುದುರೆಯಾಕೃತಿಯನ್ನು ಕಡಿಯುವ ಮೂಲಕ ಬೇಡು ಹಬ್ಬಕ್ಕೆ ಮಂಗಳ ಹಾಡಲಾಗುತ್ತಿತ್ತು. ಈ ಪ್ರಸಿದ್ಧ ಹಬ್ಬ ಮುಗಿದ ನಂತರ ಈ ಭಾಗದ ಜನರು ತಮ್ಮ ಕೃಷಿ ಚಟುವಟಿಕೆಗಳನ್ನು ಆರಂಭಿಸುವುದು ವಾಡಿಕೆಯಾಗಿದೆ.

ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಒಳಪಟ್ಟ 9 ಕೇರಿಗಳನ್ನು ಒಳಗೊಂಡಿರುವ ಬೇರಳಿನಾಡಿನಲ್ಲಿ ಪ್ರತಿವರ್ಷ ಈ ಸಾಂಪ್ರದಾಯಿಕ ಹಬ್ಬ ಅದ್ದೂರಿಯಾಗಿ ಜರುಗುತ್ತದೆ. ಈ 9 ಕೇರಿಗಳಲ್ಲಿ ಪಾರಣ ಹಬ್ಬದ ಪ್ರತೀಕವಾಗಿ ವಿವಿಧ ವೇಷಧಾರಿಗಳು ಅಲ್ಲಲೇ ಗುಂಪಾಗಿ ಮನೆಮನೆಗೆ ಸಂಚರಿಸುತ್ತಿದ್ದರು. ಕೆಲವು ಗುಂಪುಗಳಲ್ಲಿ ಮಹಿಳೆಯರಂತೆ ವೇಷಧರಿಸಿದ ವೇಷದಾರಿಗಳು ವಿಶೇಷವಾಗಿ ಗಮನ ಸೆಳೆಯುತ್ತಿದ್ದರು.ಆದರೆ ಈ ವರ್ಷ ಕೋವಿಡ್-19 ಭೀತಿಯಿಂದಾಗಿ ಲಾಕ್ ಡೌನ್ ನಿಯಮಾವಳಿ ಜಾರಿಯಲ್ಲಿರುವುದರಿಂದ ಪಾರಣ ಹಬ್ಬ ಈ ವರ್ಷವೂ ಆಚರಿಸದಿರಲು ಗ್ರಾಮಸ್ಥರು ಈ ಮೊದಲೇ ನಿರ್ಧಾರ ತೆಗೆದುಕೊಂಡಿದ್ದರು. ಈ ಕಾರಣದಿಂದಾಗಿ ಇಂದು ಬೇರಳಿನಾಡಿನಾದ್ಯಂತ ನಿರಾಶೆಯ ವಾತಾವರಣ ಕಂಡು ಬಂದಿತ್ತು. ವಿ. ಬಾಡಗ ಸಮೀಪದಲ್ಲಿರುವ, ಗ್ರಾಮದೇವರ ಆದಿ ಸ್ಥಾನವೆಂದು ಹೇಳಲಾಗುವ ‘ಕಮ್ಮಟ್ ಮಲೆ ‘ಗೆ ಎಂದಿನಂತೆ ಗ್ರಾಮದ ಒಂದಿಬ್ಬರು ಪುರಾತನ ಪದ್ಧತಿಯಂತೆ ಕಾಲ್ನಡಿಗೆಯಲ್ಲಿ ತೆರಳಿ ಪೂಜೆ ಸಲ್ಲಿಸಿ ಮರಳಿದರು. ಕೆಲ ಜಾಗಗಳಲ್ಲಿ ಕೆಲವೇ ಕೆಲವು ಗ್ರಾಮಸ್ಥರು ಸೇರಿಕೊಂಡು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ಮಾತ್ರ ಪೂರೈಸಿ ಮನೆಗೆ ತೆರಳಿದರು.

ಕೊರೋನಾ ಎಂಬ ಮಹಾಮಾರಿ ಐತಿಹಾಸಿಕ ಪಾರಣ ಹಬ್ಬಕ್ಕೆ ತಡೆಯೊಡ್ಡಿದ್ದು ಗ್ರಾಮದ ಯುವಕರ ಪಾಲಿಗಂತೂ ದೊಡ್ಡ ನಿರಾಸೆಯನ್ನೇ ಉಂಟು ಮಾಡಿದೆ. ಸತತ 2ನೇ ವರ್ಷ ಪಾರಣ ಬೇಡು ಹಬ್ಬ ನಡೆಯದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗ್ರಾಮದ ಕೆಲವು ಹಿರಿಯರು, ತಮ್ಮ ಜೀವಿತಾವಧಿಯ ಅನುಭವದಲ್ಲಾಗಲಿ, ನಮ್ಮ ಪೂರ್ವಜರ ಅನುಭವದಲ್ಲಾಗಲಿ ಪಾರಣ ಬೇಡು ಹಬ್ಬ ಸ್ಥಗಿತಗೊಂಡಿರುವ ಬಗ್ಗೆ ನಮಗೆ ಯಾವುದೇ ಉಲ್ಲೇಖದ ನೆನಪಿಲ್ಲ. ಇದೇ ಮೊದಲ ಬಾರಿಗೆ ನೂರಾರು ವರ್ಷದ ಇತಿಹಾಸವಿರುವ ಬೇಡು ಹಬ್ಬ ನಡೆಯದಿರುವುದು ಮುಂದಿನ ಪೀಳಿಗೆ ನೆನಪಿಟ್ಟುಕೊಳ್ಳುವಂತೆ ಮಾಡಿದೆ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

(ಸಂಗ್ರಹ ಚಿತ್ರಗಳಿವು)

Latest Indian news

Popular Stories

error: Content is protected !!