ಗೋಕಳ್ಳರನ್ನು ಬಂಧಿಸದಿದ್ದರೆ ಸುನೀಲ್ ಕುಮಾರ್ ಕಚೇರಿ ಮುಂದೆ ಧರಣಿ – ಯೋಗೀಶ್ ನಯನ್ ಇನ್ನಾ

ಕಾರ್ಕಳ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾರ್ಕಳ ನಗರದಿಂದ ಕೆಲವೇ ಕಿಲೋಮೀಟರ್ ದೂರದ ಕರಿಯಕಲ್ಲು ಎಂಬಲ್ಲಿನ ಯಶೋದಾ ಆಚಾರ್ಯ ಎನ್ನುವವರ ಹಟ್ಟಿಗೆ ನುಗ್ಗಿ 16 ಹಸುಗಳನ್ನು ಕಳ್ಳತನ ಮಾಡಲಾಗಿದ್ದು ಹೈನುಹಾರಿಕೆಯನ್ನೇ ಜೀವನಾಧಾರವಾಗಿ ನಂಬಿಕೊಂಡಿದ್ದ ಬಡ ಕುಟುಂಬವು ಇಂದು ದನಕಳ್ಳರ ಹಾವಳಿಯಿಂದಾಗಿ ದಿಕ್ಕು ತೋಚದಂತಾಗಿದೆ. ಯಶೋದಾ ಆಚಾರ್ಯರ ಮನೆಯ ಗೋಕಳ್ಳತನ ಪ್ರಕರಣವು ಬೆಳಕಿಗೆ ಬಂದ ಮರುದಿನವೇ ನಿಟ್ಟೆ ಸಮೀಪದ ಲೆಮಿನಾ ಕ್ರಾಸಿನ ರಾಜೇಶ್ ಆಚಾರ್ಯ ಎನ್ನುವವರ ಮನೆಯ ಹಟ್ಟಿಯಿಂದಲೂ 14 ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಕಾರ್ಕಳ ಕ್ಷೇತ್ರವೊಂದರಲ್ಲೇ ಕಳೆದ ಎರಡು ವರ್ಷದ ಅವಧಿಯಲ್ಲಿ ಸುಮಾರು 2000 ಸಾವಿರಕ್ಕೂ ಮಿಕ್ಕಿ ಹೈನುಗಾರರ ಗೋವುಗಳನ್ನು ಹಟ್ಟಿಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರವಿರುವಾಗ ದೇಶದ ಯಾವುದೇ ಮೂಲೆಯಲ್ಲಿ ಗೋಕಳ್ಳತನ ನಡೆದರೂ ವಿರಾವೇಷದ ಭಾಷಣ ಬಿಗಿಯುವ ಸುನೀಲ್ ಕುಮಾರ್ ಅವರು ತನ್ನದೇ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದರೂ ಮೌವಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ. ಗೋಕಳ್ಳರಿಗೆ ಪರೋಕ್ಷವಾಗಿ ಸಚಿವ ಸುನೀಲ್ ಕುಮಾರ್ ಅವರೇ ಬೆಂಬಲಿಸುತ್ತಿದ್ದಾರೆಯೇ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಸುನೀಲ್ ಕುಮಾರ್ ಅವರ ಮೌನವೂ ಈ ಮಾತಿಗೆ ಪುಷ್ಟಿ ನೀಡುವಂತಿದೆ.

ಕಾರ್ಕಳದ ನಿಟ್ಟೆ, ಪಳ್ಳಿ, ಬೈಲೂರು, ಬೆಳ್ಮಣ್, ರೆಂಜಾಳ, ಇರ್ವತ್ತೂರು, ಬಜಗೋಳಿ, ಮಿಯ್ಯಾರು, ಹೆಬ್ರಿ, ಅಜೆಕಾರು ಮುಂತಾದೆಡೆ ಅವ್ಯಾಹತವಾಗಿ ಗೋಕಳ್ಳತನ ನಡೆಯುತ್ತಿದ್ದ ಸಚಿವರಾದ ಸುನೀಲ್ ಕುಮಾರ್ ಅವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖೇದಕರ. ಗೋವಿನ ಹೆಸರಿನಲ್ಲಿ ಅಧಿಕಾರವನ್ನು ಪಡೆದು ಇಂದು ಗೋವಿನ ರೋಧನವನ್ನು ಕೇಳಿಸದೇ ಆ ಬಗ್ಗೆ ತುಟಿಬಿಚ್ಚದ ಸುನೀಲ್ ಕುಮಾರ್ ಅವರ ನಡೆ ಅಚ್ಚರಿ ಮೂಡಿಸಿದೆ. ಯಶೋದಾ ಅಚಾರ್ಯ ಹಾಗೂ ರಾಜೇಶ್ ಅಚಾರ್ಯರ ಮನೆಗಳಿಂದ ಕಳವಾದ 30 ಗೋವುಗಳು ಹಾಗೂ ಕಾರ್ಕಳದ ಇನ್ನಿತರ ಭಾಗಗಳಲ್ಲಿ ನಡೆದ ಗೋಕಳ್ಳತನದ ಕಳ್ಳರನ್ನು ಬಂಧಿಸಲು ವಿಫಲರಾದರೆ ಸಚಿವ ಸುನೀಲ್ ಕುಮಾರ್ ಅವರ ಕಛೇರಿಯ ಮುಂಬಾಗದಲ್ಲಿ ಸಂತ್ರಸ್ತರೊಂದಿಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ನಯನ್ ಇನ್ನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories